ಟಿಪ್ಪು ಸುಲ್ತಾನ್ ವಿಷಯವಾಗಿ ಮಾಜಿ ಸಚಿವ ಹೆಚ್. ವಿಶ್ವನಾಥ್ ನೀಡಿದ ಹೇಳಿಕೆ ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಮೊದಲಿನಿಂದಲೂ ಟಿಪ್ಪುಸುಲ್ತಾನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಪಠ್ಯದಿಂದಲೂ ಟಿಪ್ಪು ಪಠ್ಯ ಕೈಬಿಡಬೇಕೆಂದು ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಟಿಪ್ಪುಸುಲ್ತಾನ್ ಪಾಠವನ್ನು ಪಠ್ಯದಿಂದ ಕೈ ಬಿಟ್ಟಿಲ್ಲ. 5 ನೇತರಗತಿಯ ಬದಲು 7ನೇ ತರಗತಿಯಲ್ಲಿ ಟಿಪ್ಪು ಪಾಠ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣ ಬ್ರಿಟೀಷರ ವಿರುದ್ಧ ಹೋರಾಡಿದಂತೆ ಟಿಪ್ಪು ಸುಲ್ತಾನ್ ಹೋರಾಟ ನಡೆಸಿದ್ದು, ಟಿಪ್ಪು ಈ ನೆಲದ ಮಗ. ವೀರಯೋಧನಾಗಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್. ಅಶೋಕ, ಟಿಪ್ಪು ಕುರಿತರಾಗಿ ವಿಶ್ವನಾಥ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಟಿಪ್ಪು ಕುರಿತಾದ ನಮ್ಮ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ತಿಳಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರೂ, ಟಿಪ್ಪು ಕುರಿತ ನಮ್ಮ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಇತ್ತೀಚೆಗೆ ಸಾಹಿತಿ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಹೆಚ್. ವಿಶ್ವನಾಥ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಟಿಪ್ಪು ಕುರಿತಾಗಿ ಅವರು ನೀಡಿರುವ ಹೇಳಿಕೆ ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು ಸಚಿವ ಸ್ಥಾನದ ಮೇಲೆಯೂ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.