ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಾಲ ಕೊಡಿಸುವ ಬದಲಿಗೆ ಆರ್.ಬಿ.ಐ.ನಿಂದ ಸಾಲ ಪಡೆದು ಜಿಎಸ್ಟಿ ನಷ್ಟ ಪರಿಹಾರ ತುಂಬಿಕೊಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ಗದಾಪ್ರಹಾರ ಮಾಡುವ ಮೂಲಕ ಹೊಣೆಗೇಡಿತನ ಪ್ರದರ್ಶಿಸಿರುವುದು ತೀವ್ರ ಖಂಡನೀಯ ಎಂದು ಹೇಳಿದ್ದಾರೆ.
ಕೊರೊನಾ ಸಂಕಷ್ಟ ದೇವರ ಅಸಮಾನ್ಯ ಆಟ ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಬಹುದೊಡ್ಡ ನಂಬಿಕೆಗೆ ಕೇಂದ್ರ ಕೊಡಲಿ ಪೆಟ್ಟು ನೀಡಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಿ, ನೀವೇ ತೀರಿಸಿ ಎನ್ನುವ ಆಯ್ಕೆಯನ್ನು ಮುಂದಿಟ್ಟು ರಾಜ್ಯಗಳ ಆರ್ಥಿಕತೆಗೆ ಕೇಂದ್ರ ಸರ್ಕಾರ ಕೊಳ್ಳಿ ಇಟ್ಟಿದೆ ಎಂದು ಟೀಕಿಸಿದ್ದಾರೆ.
ತಾಳ ತಪ್ಪಿದ ಕೇಂದ್ರ ಸರ್ಕಾರದ ದಿಕ್ಕೆಟ್ಟ ಅರ್ಥವ್ಯವಸ್ಥೆ ಮತ್ತು ಮುನ್ನೋಟದ ಅಂದಾಜು ಗ್ರಹಿಸದ ವೈಫಲ್ಯದ ಫಲವಾಗಿ ರಾಜ್ಯ ಸರ್ಕಾರಗಳು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಗೆ ಸಿಲುಕಿ ನಲುಗುತ್ತಿವೆ. ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಆರ್.ಬಿ.ಐ.ನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟಪರಿಹಾರ ತುಂಬಿಕೊಡಬೇಕು ಎಂದು ಹೆಚ್.ಡಿ.ಕೆ. ಒತ್ತಾಯಿಸಿದ್ದಾರೆ.