ಕೊರೊನಾ ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತಗಳಿಂದ ಎಚ್ಚರಿಕೆ ಫಲಕಗಳನ್ನು ಹಾಕುತ್ತಿರುವುದು ನವಯುಗದ ಸಾಮಾಜಿಕ ತಾರತಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸೋಂಕಿತ ಕುಟುಂಬಗಳನ್ನು ಸಮಾಜ ತಿರಸ್ಕಾರದಿಂದ ನೋಡುವಂತೆ ಮಾಡುತ್ತಿದೆ. ಸೋಂಕಿನ ನಂತರ ವ್ಯಕ್ತಿ, ಕುಟುಂಬ ಗೌರವಯುತವಾಗಿ ಬದುಕಬೇಕು. ಹಾಗಾಗಿ ಫಲಕ ಹಾಕುವ ಪರಿಪಾಠವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಸೋಂಕಿತರ ಮನೆಗಳ ಎದುರು ಫಲಕ ಹಾಕಿ ಅಸ್ಪೃಶ್ಯತೆ ಸೃಷ್ಟಿಸುವ ಬದಲು ಆರೋಗ್ಯ ಕಾರ್ಯಕರ್ತರನ್ನು ಅವರ ಮನೆಗೆ ಕಳುಹಿಸಿ ಜಾಗೃತಿ ಅರಿವು ಮೂಡಿಸಬೇಕು. ಮನೆಯಿಂದ ಹೊರಬರದಂತೆ ಅವರ ಜವಾಬ್ದಾರಿ ತಿಳಿಸಿಕೊಡಬೇಕು. ಅದು ಬಿಟ್ಟು ಅವಮಾನಿಸುವ ಪರಿಪಾಠ ಬೇಡ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಲಿ ಎಂದು ಆಗ್ರಹಿಸಿದ್ದಾರೆ.
ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವುದು ಆಸ್ಪತ್ರೆಗಳ ತಪ್ಪು. ಅದೇ ಕಾರಣಕ್ಕೆ ಮೆಡಿಕಲ್ ಕಾಲೇಜು ಲೈಸೆನ್ಸ್ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ. ಇಂತಹ ತುರ್ತುಪರಿಸ್ಥಿತಿಯಲ್ಲಿ ಅದರಿಂದ ಲಾಭವಾಗುವುದಿಲ್ಲ. ಮೆಡಿಕಲ್ ಕಾಲೇಜುಗಳ ಲೈಸೆನ್ಸ್ ರದ್ದು ಮಾಡುವ ಅಧಿಕಾರ ಇರುವುದು ಎಂಸಿಐಗೆ. ಸರ್ಕಾರಕ್ಕೆ ಇಲ್ಲ. ಖಾಸಗಿ ಕಾಲೇಜುಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಸೇವೆ ಪಡೆಯುವ ಬಗ್ಗೆ ಸರ್ಕಾರ ಗಮನಹರಿಸಬೇಕು. ಅಗತ್ಯತೆಗಳನ್ನು ಪೂರೈಸಬೇಕು. ಸಾಂಘಿಕ ಹೋರಾಟ ನಡೆಸಬೇಕು ಎಂದು ಹೇಳಿದ್ದಾರೆ.
https://twitter.com/hd_kumaraswamy/status/1284746716776783872