ಟ್ರ್ಯಾಕ್ಟರ್, ವಾಹನ ಇರುವ ರೈತರ ಬಿಪಿಎಲ್ ಕಾರ್ಡ್ ಗಳನ್ನು ಹಿಂತಿರುಗಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವುದು ಮೂರ್ಖತನದ ಸೂಚನೆಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ರೈತರ ಮೇಲೆ ದೌರ್ಜನ್ಯ ಎಸಗುವ, ಗುಂಡಿಕ್ಕುವ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಂತೆ ಕಾಣುತ್ತದೆ ಎಂದು ಟೀಕಿಸಿದ್ದಾರೆ.
ರೈತರಿಗೆ ಬಿಪಿಎಲ್ ಕಾರ್ಡ್ ಹಿಂತಿರುಗಿಸಲು ಹೇಳಿರುವ ಸರ್ಕಾರ ಅದಕ್ಕೆ ಟ್ರ್ಯಾಕ್ಟರ್ ಮತ್ತು ವಾಹನಗಳನ್ನು ಮಾನದಂಡ ಮಾಡಿದೆ. ವೈಜ್ಞಾನಿಕ ಕೃಷಿ, ಟ್ರ್ಯಾಕ್ಟರ್ ಖರೀದಿಗೆ ಪ್ರೋತ್ಸಾಹ ನೀಡುತ್ತಿರುವುದು ಸರ್ಕಾರಗಳೇ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಟ್ರ್ಯಾಕ್ಟರ್ ಖರೀದಿಸಲು ಹೇಳಿ ಅದನ್ನೇ ಮುಂದಿಟ್ಟುಕೊಂಡು ಬಿಪಿಎಲ್ ಕಾರ್ಡ್ ಕಸಿದುಕೊಳ್ಳುವುದು ಮೂರ್ಖತನವಲ್ಲವೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇಂದಿನ ಪೈಪೋಟಿ ಯುಗದಲ್ಲಿ ಕೃಷಿಕರು ಯಂತ್ರ ವಾಹನಗಳನ್ನು ಅಗತ್ಯವಾಗಿದ್ದು ಸರ್ಕಾರ ಅದಕ್ಕೆ ಪ್ರೋತ್ಸಾಹ ನೀಡಬೇಕು. ಬಿಪಿಎಲ್ ಕಾರ್ಡ್ ಕಸಿದುಕೊಳ್ಳುವ ಬೆದರಿಕೆಯೊಡ್ಡಬಾರದು. ಬಿಪಿಎಲ್ ಕಾರ್ಡ್ ಕೇವಲ ಪಡಿತರಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ ಆಧಾರ ಎಂಬುದು ಸರ್ಕಾರದ ಗಮನದಲ್ಲಿರಲಿ ಎಂದು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗಬೇಕು. ಅದಕ್ಕಾಗಿ ರೈತರ ಅನ್ನದ ತಟ್ಟೆಗೆ ಕೈ ಹಾಕಬಾರದು. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ದೋಷಗಳಿವೆ. ಪಟ್ಟಭದ್ರ ಹಿತಾಸಕ್ತಿಗಳಿವೆ. ಅದನ್ನು ಮೊದಲು ಹೋಗಲಾಡಿಸಬೇಕು. ಸರ್ಕಾರ ಅದರತ್ತ ಗಮನಹರಿಸಲಿ. ಮಾತಿಗೆ ಮೊದಲು ರೈತರ ಕೊರಳು ಹಿಂಡುವ ತನ್ನ ಎಂದಿನ ಅಭ್ಯಾಸವನ್ನು ತೊರೆಯಲಿ ಎಂದು ಹೇಳಿದ್ದಾರೆ.