ಹಳೆ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಿ ಪರಿಣಾಮಕಾರಿಯಾಗಿ ಕೋವಿಡ್ ನಿಗ್ರಹಿಸುವತ್ತ ಗಮನ ಹರಿಸಬೇಕು. ಇದಕ್ಕೆ ನಮ್ಮ ಬೆಂಬಲವಿದೆ. ನಿಮ್ಮ ಕ್ಷುಲ್ಲಕ ನಡವಳಿಕೆಗಳಿಕೆಗೆ ಅಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕೆಸರೆರಚಾಟವನ್ನು ಗಮನಿಸಿದೆ. ರಾಜ್ಯದ ಪ್ರತಿಯೊಬ್ಬರ ಜೀವ, ಜೀವನಕ್ಕೆ ಕೊರೋನಾ ಬೆದರಿಕೆಯೊಡ್ಡಿರುವಾಗ, ಬದುಕು ಕಸಿಯುತ್ತಿರುವಾಗ ಎರಡು ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಂಡು ಬೇಸರವಾಗಿದೆ ಎಂದು ತಿಳಿಸಿದ್ದಾರೆ.
ಪರಿಕರಗಳ ಖರೀದಿಯಲ್ಲಿ ಅಕ್ರಮ ಎಸಗಿರುವುದು ನಿಜವೇ ಆಗಿದ್ದರೆ ಅದು ಆಡಳಿತ ಪಕ್ಷದ ನೈತಿಕತೆಯಿಲ್ಲದ ಮನುಷ್ಯತ್ವ ಹೀನಕೃತ್ಯವೇ ಸರಿ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೆ ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಆ ನಾಯಕರ ರಾಜಕೀಯ ದಾಹದ ಪ್ರತೀಕವೆಂದು ಹೇಳಿದ್ದಾರೆ.