ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ ತಂಬಾಕು ನಿಷೇಧಿಸಲು ಸರ್ಕಾರ ಮುಂದಾಗಿದೆ. ವಾರದೊಳಗೆ ಈ ಕುರಿತಂತೆ ಸುಗ್ರಿವಾಜ್ಞೆ ಹೊರಡಿಸುವುದಾಗಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ವರದಿ ಸಲ್ಲಿಸಲಾಗಿದೆ.
ಗುಟ್ಕಾ, ತಂಬಾಕು ಉತ್ಪನ್ನಗಳ ನಿಷೇಧ ಕುರಿತಂತೆ ರಾಜ್ಯಪಾಲರು ಜುಲೈನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಬುಧವಾರ ರಾಜ್ಯಪಾಲರನ್ನು ಸಿಎಂ ಅವರ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮತ್ತು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೀದ್ ಅಖ್ತರ್ ಭೇಟಿ ಮಾಡಿ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಗುಟ್ಕಾ, ತಂಬಾಕು ಉತ್ಪನ್ನ, ಗುಟ್ಕಾ ಪ್ಯಾಕೆಟ್ ಗಳಲ್ಲಿ ಡ್ರಗ್ಸ್ ಪೂರೈಕೆ ನಿಯಂತ್ರಣ ಕುರಿತಂತೆ ರಾಜ್ಯ ಸರ್ಕಾರದ ವತಿಯಿಂದ ಕೈಗೊಂಡಿರುವ ನಿರ್ಧಾರಗಳ ಕುರಿತು ರಾಜ್ಯಪಾಲರಿಗೆ ವರದಿ ನೀಡಲಾಗಿದ್ದು, ಈ ಕುರಿತಂತೆ ವಾರದೊಳಗೆ ಸುಗ್ರೀವಾಜ್ಞೆ ಹೊರಡಿಸಲು ವರದಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.