ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್ಡೌನ್ ಕ್ರಮಗಳ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂಗಳನ್ನು ವೀಕ್ಷಕರ ನಿರ್ಬಂಧದೊಂದಿಗೆ ಅಭ್ಯಾಸಕ್ಕಾಗಿ ತೆರೆಯಲು ಅನುಮತಿ ನೀಡಲಾಗಿದೆ. ಪ್ರೇಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಅನ್ಲಾಕ್ -3 ಆದೇಶದ ಅನ್ವಯ ಸಿನಿಮಾ ಮಂದಿರ, ಮನರಂಜನಾ ಪಾರ್ಕ್, ಚಿತ್ರಮಂದಿರ, ಸಭಾಂಗಣ, ಅಸೆಂಬ್ಲಿ ಹಾಲ್ ಗಳಿಗೆ ನಿರ್ಬಂಧವಿರುತ್ತದೆ. ಸಾಮಾಜಿಕ-ರಾಜಕೀಯ ಕ್ರೀಡೆ-ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಮತ್ತು ಇತರೆ ಬೃಹತ್ ಸಭೆಗಳಿಗೆ ನಿರ್ಬಂಧ ಮುಂದುವರೆದಿದೆ.
65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶ ಹೊರತುಪಡಿಸಿ ಮನೆಯಲ್ಲಿ ಇರಬೇಕು ಎಂದು ಸಲಹೆ ನೀಡಲಾಗಿದೆ. ಸರ್ಕಾರದ ಆದೇಶ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ರಾಜ್ಯದಲ್ಲಿನ ಸಾಮಾಜಿಕ ಕ್ಲಬ್ ಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು, ಮೇಜಿನ ಮೇಲೆ ಆಹಾರ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶವಿರುವ ಕುರಿತು ಸ್ಪಷ್ಟಪಡಿಸಲಾಗಿದೆ. ಸಾಮಾಜಿಕ ಕ್ಲಬ್ ಗಳಲ್ಲಿ ಮದ್ಯ ಸರಬರಾಜು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.