ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ವೇಳಾಪಟ್ಟಿ ಸಿದ್ದಪಡಿಸಲಾಗಿದೆ. ಸಂಭಾವ್ಯ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದಿಂದ ಹೈಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದೆ.
ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗದ ವತಿಯಿಂದ ಹೈಕೋರ್ಟ್ ಗೆ ವೇಳಾಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ. ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಸೇರಿದಂತೆ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದಿದೆ. ಚುನಾವಣಾ ಆಯೋಗದ ಪರವಾಗಿ ಹಿರಿಯ ವಕೀಲ ಕೆ.ಎಂ. ಫಣೀಂದ್ರ ಸಂಭಾವ್ಯ ವೇಳಾಪಟ್ಟಿಯನ್ನು ಸಲ್ಲಿಸಿದ್ದಾರೆ.
ರಾಜ್ಯದ 2 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ವಿಧಾನಪರಿಷತ್ 4 ಕ್ಷೇತ್ರಗಳಿಗೂ ಕೂಡ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಪ್ರಕ್ರಿಯೆ, ನೀತಿ ಸಂಹಿತೆ ಮುಕ್ತಾಯವಾದ ನಂತರ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬಹುದಾಗಿದೆ ಎಂದು ಹೇಳಲಾಗಿದೆ. ಕೊರೋನಾ ಪರಿಸ್ಥಿತಿ ಆಧರಿಸಿ ಚುನಾವಣೆ ನಡೆಸಲು ತಿಳಿಸಿದ ಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 16 ಕ್ಕೆ ಮುಂದೂಡಿದೆ ಎನ್ನಲಾಗಿದೆ.