ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ ಅಸಾಧ್ಯವೆಂದು ಚುನಾವಣಾ ಆಯೋಗದ ವತಿಯಿಂದ ಹೈಕೋರ್ಟ್ಗೆ ಮಾಹಿತಿ ನೀಡಲಾಗಿದ್ದು ಸರ್ಕಾರ ಒಲ್ಲದ ಮನಸ್ಸಿನಿಂದಲೇ ಒಪ್ಪಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಮತ್ತು ಪ್ರತಿಪಕ್ಷಗಳು ಒಲವು ತೋರದೆ ಮುಂದೂಡಿಕೆ ಮಾಡಬೇಕೆಂಬ ಅಭಿಪ್ರಾಯ ಹೊಂದಿವೆ. ಆದರೆ, ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಲು ಸಾಧ್ಯವೇ ಇಲ್ಲವೆಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ಗೆ ತಿಳಿಸಿದೆ.
ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಸಿ. ಕೊಂಡಯ್ಯ ಮತ್ತಿತರರು ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಶೀಘ್ರವೇ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠದ ಎದುರು ನಡೆದಿದೆ. ಡಿಸೆಂಬರ್ ಒಳಗೆ ಚುನಾವಣೆ ನಡೆದಲ್ಲಿ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಆಡಳಿತವಿರುತ್ತದೆ ಎಂದು ಅರ್ಜಿದಾರರ ಪರ ವಕೀಲರಾದ ಪ್ರೊ. ರವಿವರ್ಮ ಕುಮಾರ್ ಹೇಳಿದ್ದಾರೆ. ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಹಾಜರಾಗಿ ವಾದ ಮಂಡಿಸಲಿದ್ದಾರೆ ಎಂದು ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ್ದು, ವಿಚಾರಣೆಯನ್ನು ಅಕ್ಟೋಬರ್ 21 ಕ್ಕೆ ಮುಂದೂಡಲಾಗಿದೆ.