ಬೆಂಗಳೂರು: ನಕಲಿ ಬ್ಯಾಂಕ್ ಖಾತೆ ತೆರೆದು 12 ಲಕ್ಷ ರೂಪಾಯಿ ವಂಚಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಒಎಫ್ಸಿ ಕೇಬಲ್ ಅಳವಡಿಸಲು ಪರವಾನಿಗೆ ಪಡೆಯಲು ಜಿಯೋ ಡಿಜಿಟಲ್ ಕಂಪನಿಯ ಗುತ್ತಿಗೆದಾರರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ.
ಅನುಮತಿ ನೀಡಲು 12.6 ಲಕ್ಷ ರೂ. ತೆರಿಗೆ ಪಾವತಿಸುವಂತೆ ಬಾಗಲೂರು ಪಿಡಿಓ ಅನ್ನಪೂರ್ಣೇಶ್ವರಿ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಆದರೆ ಹಣ ಪಾವತಿಸದ ಕಾರಣ ಅನುಮತಿ ನೀಡಿರಲಿಲ್ಲ. ಅನುಮತಿ ಸಿಗದಿದ್ದರೂ ಕೇಬಲ್ ಅಳವಡಿಸುವ ಕೆಲಸವನ್ನು ಗುತ್ತಿಗೆದಾರ ಆರಂಭಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪಿಡಿಓ ವಿಚಾರಿಸಿದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ ಅವರಿಗೆ ಡಿಡಿ ಮೂಲಕ ಹಣ ನೀಡಿರುವುದಾಗಿ ಗುತ್ತಿಗೆದಾರ ಆನಂದ್ ತಿಳಿಸಿದ್ದಾರೆ.
ಈ ಬಗ್ಗೆ ಪಿಡಿಓ ಪ್ರಶ್ನಿಸಿದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ ಗೊಂದಲದ ಹೇಳಿಕೆ ನೀಡಿದ್ದಾರೆ. ಪರಿಶೀಲಿಸಿದಾಗ ಸಂಜಯನಗರದ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಗೆ ಪಿಡಿಓ ಹೆಸರಿನಲ್ಲಿ ಹಣ ಜಮೆ ಆಗಿರುವುದು ಗೊತ್ತಾಗಿದೆ.
ಆದರೆ ಆ ಬ್ಯಾಂಕಿನಲ್ಲಿ ಬಾಗಲೂರು ಗ್ರಾಮ ಪಂಚಾಯಿತಿಯ ಯಾವುದೇ ಖಾತೆ ಇರಲಿಲ್ಲ. ನಂತರ ಪಿಡಿಓ ಸಂಜಯನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪ್ರಕರಣ ಬಾಗಲೂರು ಠಾಣೆಗೆ ವರ್ಗಾವಣೆಯಾಗಿದ್ದು ತನಿಖೆ ನಡೆಸಿದ ಪೊಲೀಸರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.