ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಕುರಿತಾಗಿ ಹೈಕೋರ್ಟ್ ನಿಂದ ಚುನಾವಣಾ ಆಯೋಗದ ನಿಲುವು ಕೇಳಲಾಗಿದೆ.
ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಂಡ 21 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲು ಮುಂದಾಗಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲಾಗಿದೆ.
ಚುನಾವಣಾ ಆಯೋಗದ ಪರ ವಕೀಲರಾದ ಕೆ.ಎಸ್. ಫಣೀಂದ್ರ, ರಾಜ್ಯದ 21 ಜಿಲ್ಲೆಗಳ ಗ್ರಾಮಪಂಚಾಯಿತಿಗಳ ಮೀಸಲಾತಿ ಪ್ರಕಟಿಸಲಾಗಿದ್ದು ಆಗಸ್ಟ್ 11ರಂದು ಇನ್ನು 8 ಜಿಲ್ಲೆಗಳ ಮೀಸಲಾತಿ ಪ್ರಕಟಿಸಲಾಗುವುದು. ಬೆಂಗಳೂರು ನಗರ ಜಿಲ್ಲಾ ಆಡಳಿತ ಆಗಸ್ಟ್ 24 ರವರೆಗೆ ಕಾಲಾವಕಾಶ ಕೇಳಿದೆ ಎಂದು ತಿಳಿಸಿದ್ದಾರೆ. ಸೆಪ್ಟಂಬರ್ ಮೊದಲ ವಾರದಲ್ಲಿ ಮತದಾರರ ಪಟ್ಟಿ ಅಂತಿಮಗೊಳಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಗ್ರಾಮಪಂಚಾಯಿತಿಗಳ ಅವಧಿ ಮುಗಿದಿರುವ ಕಾರಣ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೀಸಲಾತಿ ಪ್ರಕಟಗೊಂಡ 21 ಜಿಲ್ಲೆಗಳಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಬಹುದು ಎಂದು ಅರ್ಜಿದಾರರ ಪರ ವಕೀಲರಾದ ಪ್ರೊ. ರವಿವರ್ಮ ಕುಮಾರ್ ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್, ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಪೀಠದಲ್ಲಿ ವಿಚಾರಣೆ ನಡೆದು, ಚುನಾವಣಾ ಆಯೋಗದ ನಿಲುವು ತಿಳಿಸುವಂತೆ ಹೇಳಿರುವ ಹೈಕೋರ್ಟ್ ಆಗಸ್ಟ್ 27ಕ್ಕೆ ವಿಚಾರಣೆ ಮುಂದೂಡಿದೆ.