ಕೊರೊನಾ ಸಂಕಷ್ಟದಿಂದ ಆರ್ಥಿಕವಾಗಿ ಈಗಾಗಲೇ ತತ್ತರಿಸಿರುವ ಶ್ರೀಸಾಮಾನ್ಯನಿಗೆ ದುನಿಯಾ ದುಬಾರಿಯಾಗಿದೆ. ಇದರ ಮಧ್ಯೆಯೂ ಗೌರಿ-ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಂಡು ಬರುತ್ತಿದೆ. ಈಗಾಗಲೇ ಹಬ್ಬದ ಸಡಗರ ಎಲ್ಲೆಡೆ ಕಳೆಕಟ್ಟಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಬಲು ಜೋರಾಗಿ ಸಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಾಗರವೇ ಕಂಡು ಬರುತ್ತಿದೆ. ಪೂಜಾ ಸಾಮಾಗ್ರಿಗಳು, ಹೊಸ ಬಟ್ಟೆ, ಹಣ್ಣು, ಹೂ ಖರೀದಿಯಲ್ಲಿ ಜನತೆ ತೊಡಗಿದ್ದಾರೆ.
ಈ ಬಾರಿ ಹಬ್ಬಕ್ಕಾಗಿ ನಿರ್ಬಂಧಗಳ ನಡುವೆಯೂ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಗೌರಿ-ಗಣೇಶ ವಿಗ್ರಹಗಳು ಮಾರಾಟವಾಗಲು ಸಿದ್ದವಾಗಿವೆ. ಈಗಾಗಲೇ ಬೆಲೆ ಏರಿಕೆಯಿಂದ ಶ್ರೀ ಸಾಮಾನ್ಯರು ತತ್ತರಿಸಿರುವ ಜೊತೆಗೆ ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹಣ್ಣು, ಹೂಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಅಲ್ಲದೇ ಪ್ರಮುಖ ಸ್ಥಳಗಳಲ್ಲಿ ಬಾಳೆಕಂದು, ಮಾವಿನ ಸೊಪ್ಪು ಮಾರಾಟ ಜೋರಾಗಿ ಸಾಗಿದೆ.