ಬೆಂಗಳೂರು: ರಾಜ್ಯದ ಯಾವುದೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್ -19 ಅಥವಾ ಕೋವಿಡ್-19 ರಂತಹ ರೋಗ ಲಕ್ಷಣಗಳ ಇರುವ ರೋಗಿಗಳಿಗೆ ದಾಖಲಾತಿ ನಿರಾಕರಿಸುವಂತಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ನೀಡಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ -2017 ರ ಅನ್ವಯ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಸಾಮಾನ್ಯ ರೋಗಿಗಳಿಗೂ ಕೊರೊನಾ ಸೋಂಕು ತಗುಲಬಹುದು ಎಂಬ ಭಯದಿಂದ ರಾಜ್ಯದ ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ನೀಡಲು, ದಾಖಲಾತಿ ಮಾಡಿಕೊಳ್ಳಲು ನಿರಾಕರಿಸುತ್ತಿವೆ. ಇದು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ನೀಡಲಾಗಿರುವ ಅಧಿಕಾರದ ಅಡಿಯಲ್ಲಿ ಆದೇಶ ಹೊರಡಿಸಲಾಗಿದ್ದು, ಇದರ ಅನುಸಾರ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್-19 ಸೋಂಕಿತರು ಅಥವಾ ರೋಗ ಲಕ್ಷಣವುಳ್ಳ ರೋಗಿಗಳಿಗೆ ದಾಖಲಾತಿ ನಿರಾಕರಿಸುವಂತಿಲ್ಲ ಎಂದು ಹೇಳಲಾಗಿದೆ.
ಕೋವಿಡ್ ಲಕ್ಷಣ ಹೊಂದಿದ್ದರೂ ಅಥವಾ ಹೊಂದದಿದ್ದರೂ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದ್ದು, ರೋಗಿ ಶುಲ್ಕ ಭರಿಸಲು ಸಿದ್ಧವಾಗಿದ್ದರೆ ರಾಜ್ಯದ ಯಾವುದೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಪ್ರವೇಶ ನಿರಾಕರಿಸುವಂತಿಲ್ಲ. ಕೋವಿಡ್-19 ಇರುವ ಅಥವಾ ಇಲ್ಲದಿರುವ ರೋಗಿಗೆ ಪ್ರಯೋಗಾಲಯದಿಂದ ಪಾಸಿಟಿವ್/ನೆಗೆಟಿವ್ ವರದಿ ತರುವಂತೆ ಒತ್ತಾಯಿಸದೇ ರೋಗಿಗಳು ನೀಡುವ ಎಸ್ಎಂಎಸ್, ವಾಟ್ಸಾಪ್ ಅಥವಾ ಆರೋಗ್ಯ ಸೇತು ವರದಿ ಮೊದಲಾದ ವರದಿ ಆಧಾರದ ಮೇಲೆ ಚಿಕಿತ್ಸೆ ನೀಡಬೇಕೆಂದು ತಿಳಿಸಲಾಗಿದೆ.