ಬೆಂಗಳೂರು: ಚುನಾವಣಾ ಆಯೋಗ ಈ ವರ್ಷಾಂತ್ಯದೊಳಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ಸರ್ಕಾರ ಉಪಚುನಾವಣೆ, ನೆರೆ, ಪ್ರವಾಹ, ಕೊರೋನಾ ಕಾರಣದಿಂದ ಚುನಾವಣೆ ಮುಂದೂಡಲು ಒಲವು ತೋರಿದೆ.
ಈ ಕುರಿತಂತೆ ಹೈಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳು ಕೂಡ ಸಾಥ್ ನೀಡಿವೆ ಎನ್ನಲಾಗಿದೆ. ನ್ಯಾಯಾಲಯದ ಒಪ್ಪಿಗೆ ಸಿಕ್ಕಲ್ಲಿ ಮುಂದಿನ ವರ್ಷಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚುನಾವಣಾ ಆಯೋಗ ಹೈಕೋರ್ಟ್ ಗೆ ಮಾಹಿತಿ ನೀಡಿ, ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದೆ. ಆದರೆ, ಪಂಚಾಯಿತಿ ಚುನಾವಣೆಗೆ ಸರ್ಕಾರ ಒಲವು ತೋರಿಲ್ಲ. ಕೊರೋನಾ ಸೋಂಕು ಹೆಚ್ಚಿರುವ ಸಂದರ್ಭದಲ್ಲಿ ಚುನಾವಣೆ ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಸರ್ಕಾರದ ಜೊತೆಗೆ ಪ್ರತಿಪಕ್ಷಗಳು ಕೂಡ ಪಂಚಾಯಿತಿ ಚುನಾವಣೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ಹೊಂದಿವೆ.
ಚುನಾವಣೆ ಕರ್ತವ್ಯ ನಿರ್ವಹಿಸುವ ಶಾಲಾ ಶಿಕ್ಷಕರು, ವಿವಿಧ ಇಲಾಖೆ ನೌಕರರಲ್ಲಿ ಅನೇಕರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಸೋಂಕು ಇಲ್ಲದವರನ್ನು ಗುರುತಿಸಿ ಕರ್ತವ್ಯಕ್ಕೆ ನಿಯೋಜಿಸುವುದು ಕಷ್ಟಸಾಧ್ಯ. ಇನ್ನೂ ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಾಗುವ ಅಪಾಯ ಕೂಡ ಇದೆ. ಅಲ್ಲದೇ, ಇಂತಹ ಸಂದರ್ಭದಲ್ಲಿ ಜನ ಮತದಾನಕ್ಕೆ ಬರುವ ಸಾಧ್ಯತೆ ಕಡಿಮೆ ಇರುತ್ತದೆ.
ಈ ಕಾರಣದಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಗ್ರಾಮಪಂಚಾಯಿತಿ ಚುನಾವಣೆಯನ್ನು ಕೆಲ ತಿಂಗಳ ಕಾಲ ಮುಂದೂಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಆಯೋಗ ಡಿಸೆಂಬರ್ ಒಳಗೆ ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಹೈಕೋರ್ಟ್ ಗೆ ಚುನಾವಣೆ ಮುಂದೂಡಲು ಸರ್ಕಾರ ಮನವಿ ಮಾಡಲಿದೆ ಎನ್ನಲಾಗಿದೆ.