ಬೆಂಗಳೂರು: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಅವರ ಕುಟುಂಬದ 8 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಅವರ ಪುತ್ರ ಡಾ. ಗೋಪಾಲ್ ಕಾರಜೋಳ 23 ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಜೋಳ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಅನಿವಾರ್ಯವಾದರೆ ಮಾತ್ರ ಓಡಾಡಬೇಕು. ಆಯಾಸವಾಗದಂತೆ ನೋಡಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ದೂರದ ಪ್ರಯಾಣ ಬೇಡವೆಂದು ವೈದ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಕಾರಜೋಳ ಉತ್ತರ ಕರ್ನಾಟಕ ಪ್ರವಾಸಕ್ಕೆ ತೆರಳಿಲ್ಲವೆಂದು ಹೇಳಲಾಗಿದೆ.
ನೆರೆ ಹಾನಿ ಪ್ರದೇಶಗಳಿಗೆ ತೆರಳದಿದ್ದರೂ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡುತ್ತಿದ್ದಾರೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಡಾ. ಗೋಪಾಲ್ ಕಾರಜೋಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂಕಷ್ಟ ಜನರಿಗೆ ತಿಳಿದಿರುವುದಿಲ್ಲ. ಸಂಕಷ್ಟ ಅನುಭವಿಸಿದವರಿಗಷ್ಟೇ ಅದರ ನೋವು ಗೊತ್ತಿರುತ್ತದೆ. ಸಾರ್ವಜನಿಕ ಜೀವನದಲ್ಲಿರುವವರ ಹಾಜರಿ ಅಥವಾ ಗೈರು ಹಾಜರಿಯನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಒಳ್ಳೆಯದಲ್ಲ ಎಂದು ಕಾರಜೋಳ ಅವರು ಹೇಳಿದ್ದಾರೆ.