ಬೆಂಗಳೂರು: ಗ್ರಾಮಾಂತರ ಪ್ರದೇಶದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆರ್ಥಿಕ ಚಟುವಟಿಕೆ ಪ್ರೋತ್ಸಾಹಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ನರೇಗಾ ಯೋಜನೆಯಡಿ ಮೇಕೆ ಸಾಕಾಣಿಕೆದಾರರಿಗೆ ಶೆಡ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಗ್ರಾಮ ಪಂಚಾಯಿತಿಗಳ ಮೂಲಕ ಅರ್ಹ ಫಲಾನುಭವಿಗಳು ಅವಕಾಶ ಬಳಸಿಕೊಳ್ಳಬಹುದು. ವೈಯಕ್ತಿಕ ಆಧಾರಿತ ಕಾಮಗಾರಿ ಅಡಿಯಲ್ಲಿ ಮೇಕೆ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಅಂದಾಜುಪಟ್ಟಿ ತಯಾರಿಸಿ ನಿಗದಿತ ಹಣಕ್ಕೆ ಅನುಮೋದನೆ ಪಡೆದುಕೊಳ್ಳಲು ಸೂಚನೆ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಲಾಗಿದೆ.
ಮೇಕೆ ಶೆಡ್ ನಿರ್ಮಾಣಕ್ಕೆ 68 ಸಾವಿರ ರೂಪಾಯಿ ಸಾಕಾಣಿಕೆದಾರರು ತಮ್ಮಲ್ಲಿ ಇರುವ ಸ್ಥಳದ ಅನುಕೂಲಕ್ಕೆ ತಕ್ಕಂತೆ ಮಾರ್ಗಸೂಚಿಯನ್ವಯ ಶೆಡ್ ನಿರ್ಮಿಸಿಕೊಳ್ಳಬಹುದು. ಬಹುತೇಕ ರೈತರು ತಮ್ಮ ಮನೆಯ ಹಿಂಭಾಗದ ಹಿತ್ತಲುಗಳಲ್ಲಿ ಮೇಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದ ಕಳ್ಳರು, ಕಾಡುಪ್ರಾಣಿಗಳ ಕಾಟ ಇರುತ್ತದೆ. ಶೆಡ್ ನಿರ್ಮಾಣ ಮಾಡಿಕೊಂಡಲ್ಲಿ ಮೇಕೆಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಲಿದೆ. ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಮೂಲಕ ಮೇಕೆ ಸಾಕಾಣಿಕೆಗೆ ಶೆಡ್ ನಿರ್ಮಿಸಿಕೊಡಲಾಗುವುದು ಎಂದು ಹೇಳಲಾಗಿದೆ.