ಬೆಂಗಳೂರು: ರಾಜ್ಯ ಸರ್ಕಾರ ಪರಿಚಯಿಸಿರುವ ಹೊಸ ಕೈಗಾರಿಕಾ ನೀತಿ 2020-2025 ರ ಕೈಪಿಡಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್ ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ಜಗದೀಶ ಶೆಟ್ಟರ್, ನೂತನ ಕೈಗಾರಿಕಾ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಂಡವಾಳ ಹೂಡಿಕೆ ಆಕರ್ಷಣೆ ಮತ್ತು 20 ಲಕ್ಷ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶವಿದೆ ಎಂದರು.
ಹೊಸ ಕೈಗಾರಿಕಾ ನೀತಿ 2020-25ರ ಉತ್ತೇಜನಾ ಕ್ರಮ ಹಾಗೂ ರಿಯಾಯಿತಿ ಪ್ಯಾಕೇಜ್ 2020ರ ಆಗಸ್ಟ್ 13 ರಿಂದಲೇ ಅನ್ವಯವಾಗಿದ್ದು, ಮುಂದಿನ 5 ವರ್ಷಗಳ ಅವಧಿಗೆ ಅಥವಾ ಮುಂದಿನ ನೀತಿ ಘೋಷಣೆ ಆಗುವವರೆಗೆ ಜಾರಿಯಲ್ಲಿರುತ್ತದೆ. ಜಾಗತಿಕವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಭದ್ರಪಡಿಸುವ ಜತೆಗೆ ಇನ್ನೂ ಉನ್ನತ ಸಾಧನೆ ಮಾಡುವ ಮೂಲಕ ವಾರ್ಷಿಕವಾಗಿ ಶೇ.10ರಷ್ಟು ಕೈಗಾರಿಕಾ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವುದು ಹೊಸ ಕೈಗಾರಿಕಾ ನೀತಿಯ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.
ಎಲ್ಲ ಹೊಸ ಕೈಗಾರಿಕಾ ಬಂಡವಾಳ ಹೂಡಿಕೆ ಯೋಜನೆಗಳ ಒಟ್ಟಾರೆ ಆಧಾರದ ಮೇಲೆ ಕನಿಷ್ಠ ಒಟ್ಟಾರೆ ಶೇಕಡ 70 ಮತ್ತು ಗ್ರೂಪ್ ‘ಡಿ’ ಯಲ್ಲಿ ಶೇಕಡ 100ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 1,701.81 ಕೋಟಿ ರೂ. ಮೀಸಲಿರಿಸಿದ್ದು, ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರಿಸಿದರು.