ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ರಾಜ್ಯದಲ್ಲೂ ಸಹ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಮಾರಣಾಂತಿಕ ರೋಗಕ್ಕೆ ಲಸಿಕೆ ಇನ್ನು ಸಿದ್ದವಾಗಿಲ್ಲದ ಕಾರಣ ಇದರ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.
ಕೊರೊನಾ ಸೋಂಕು ಪೀಡಿತರಾಗಿ ತುರ್ತು ನಿಗಾ ಘಟಕದಲ್ಲಿ ಇರುವವರಿಗೆ ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ಲಾಸ್ಮಾ ನೀಡಿದರೆ ಅಂತವರು ಬಲು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಇಂತಹ ಹಲವು ಪ್ರಯೋಗಗಳು ನಡೆದಿವೆ.
ಆದರೆ ಪ್ಲಾಸ್ಮಾ ದಾನ ಮಾಡಲು ಸೋಂಕಿನಿಂದ ಗುಣಮುಖರಾದವರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದ್ದು, ಹೀಗಾಗಿ ರಾಜ್ಯ ಸರ್ಕಾರ ಅಂಥವರಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದೆ. ಪ್ಲಾಸ್ಮಾ ದಾನ ಮಾಡಿದವರಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.