ಮಂದಾರ್ತಿ ಎಂದಾಕ್ಷಣ ಕುಂದ ಮಂದಾರಾದಿಗಳ ಗಂಧ ಮಕರಂದವನ್ನು ಆಘ್ರಾಣಿಸುವ ಆಸ್ವಾದಿಸುವ ವೃಂದಾರಕ ವೃಂದವೇ ಬಂದು ನೆಲೆಸಿರುವ ಪುಣ್ಯಭೂಮಿಯೇ ಮಂದಾರ್ತಿ ಎಂದು ಯಕ್ಷಗಾನದಲ್ಲಿ ಕೇಳಿದ ಮಾತು ನೆನಪಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಹಿಂದೂ ದೇವಳಗಳಲ್ಲಿ ಮಂದಾರ್ತಿಯ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನವು ವಿಶಿಷ್ಟವಾದುದು.
ದೇವಿಯ ಹೆಸರಿನ ಯಕ್ಷಗಾನ ಮಂಡಳಿಯೂ ಇದೆ. ಶಕ್ತಿಸ್ವರೂಪಿಣಿಯ ಈ ಸನ್ನಿಧಿಗೆ ರಾಜ್ಯ – ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ.
ಈ ದೇಗುಲಕ್ಕೆ 9 ಶತಮಾನಗಳ ಇತಿಹಾಸವಿದೆ. ಪ್ರತಿವರ್ಷ ಕುಂಭ ಸಂಕ್ರಮಣದಂದು ವಿಜೃಂಭಣೆಯ ಜಾತ್ರೆ ನಡೆಯುತ್ತದೆ. ಫೆಬ್ರವರಿಯಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಜರುಗುತ್ತದೆ. ನಾಗಾರಾಧನೆ ಇಲ್ಲಿ ಬಹಳ ಮಹತ್ವದ ಪೂಜಾ ಕೈಂಕರ್ಯ. ದಸರೆಯ ಹಬ್ಬವನ್ನು ಇಲ್ಲಿ ಬಹಳ ಸಡಗರದಿಂದ ಆಚರಿಸಲಾಗುತ್ತದೆ.
ಮಂದಾರ್ತಿ ಬೆಂಗಳೂರಿನಿಂದ 450 ಕಿ.ಮೀ., ಮಂಗಳೂರಿನಿಂದ 85 ಕಿ.ಮೀ. ದೂರದಲ್ಲಿದೆ. ವಾಸ್ತವ್ಯಕ್ಕೆ ಸುಸಜ್ಜಿತ ವಸತಿಗೃಹಗಳಿವೆ. ಊಟ ತಿಂಡಿಗಾಗಿ ಶುಚಿಯಾದ ಉತ್ತಮ ಹೊಟೇಲುಗಳಿವೆ.