ಬೆಂಗಳೂರು: ರಾಜಧಾನಿ ಬೆಂಗಳೂರು ವರುಣಾಘಾತಕ್ಕೆ ತತ್ತರಗೊಂಡಿದ್ದು, ಬೆಂಗಳೂರಿನ ಪುರಾತನ ಗವಿಗಂಗಾಧರೇಶ್ವರ ದೇವಾಲಯಕ್ಕೂ ಜಲ ಕಂಟಕವುಂಟಾಗಿದೆ. ಭಾರೀ ಮಳೆಗೆ ದೇವಾಲಯದ ಗೋಡೆ ಕುಸಿತಗೊಂಡಿದೆ.
ವರುಣನ ಆರ್ಭಟಕ್ಕೆ ಗವಿಪುರಂನ ಗಂಗಾಧರೇಶ್ವರ ದೇವಾಲಯಕ್ಕೆ ಹೊಂದಿಕೊಂಡಿರುವ 10 ಅಡಿ ಎತ್ತರದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಮಳೆಯಿಂದಾಗಿ ರಾಜಧಾನಿಯ ರಾಜಕಾಲುವೆಗಳು ನದಿಯಂತೆ ಹರಿದಿದ್ದು, ರಸ್ತೆ, ಮನೆ, ದೇವಾಲಯಗಳು, ಅಂಗಡಿ, ಹೋಟೆಲ್ ಗಳು ಜಲಾವೃತಗೊಂಡಿದ್ದು, ಹೊಸಕೆರೆ ಹಳ್ಳಿಯಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಿನ ರಭಸಕ್ಕೆ ಕಣ್ಣ ಮುಂದೆಯೇ ಕೊಚ್ಚಿಕೊಂಡು ಹೋಗಿವೆ.
ಬನಶಂಕರಿಯ ಮೂರನೇ ಹಂತದಲ್ಲಿರುವ ದತ್ತಾತ್ರೆಯ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.