ಬೆಂಗಳೂರು: ಗೌರಿ ಗಣೇಶ ಹಬ್ಬವನ್ನು ಎಲ್ಲೆಡೆ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.
ಬೆಂಗಳೂರು ನಗರದಾದ್ಯಂತ ಗಣಪತಿ ಮೂರ್ತಿ ವಿಸರ್ಜನೆಗಾಗಿ 462 ಸಂಚಾರಿ ಟ್ಯಾಂಕರ್ ಗಳನ್ನು ಸಿದ್ಧಪಡಿಸಿದೆ. ನಾಗರಿಕರು ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸಂಚಾರಿ ಟ್ಯಾಂಕರ್ ಗಳಲ್ಲಿ ಮೂರ್ತಿ ವಿಸರ್ಜನೆ ಮಾಡಬಹುದು.
ಇನ್ನು ಸಮೀಪದ ಕಲ್ಯಾಣಿ ಅಥವಾ ಕೆರೆಗಳಲ್ಲಿಯೂ ಗಣೇಶ ಮೂರ್ತಿ ವಿಸರ್ಜನೆ ಮಾಡಬಹುದು. ಇದಕ್ಕಾಗಿ 41 ಕೆರೆಗಳನ್ನು ಬಿಬಿಎಂಪಿ ಗುರುತಿಸಿದೆ. ಮೂರ್ತಿ ವಿಸರ್ಜನೆಗಾಗಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರು ಪೂರ್ವ ವಲಯಗಳಲ್ಲಿ 138 ಸಂಚಾರಿ ಟ್ಯಾಂಕರ್ ಹಾಗೂ ಪಶ್ಚಿಮ ವಲಯದಲ್ಲಿ 84ಕ್ಕೂ ಹೆಚ್ಚು ಸಂಚಾರಿ ಟ್ಯಾಂಕರ್ ಗಳ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ಗಣೇಶೋತ್ಸವಗಳ ಆಯೋಜನೆಗಾಗಿ ಪೆಂಡಾಲ್ ಹಾಕಲು ಅನುಮತಿಗಾಗಿ ಅರ್ಜಿ ಸಲ್ಲಿಸಲು ಬೆಂಗಳೂರಿನಾದ್ಯಂತ 63 ಏಕ ಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.