ಇಂದು ಗೌರಿ ಹಬ್ಬ, ನಾಳೆ ಗಣಪತಿ ಹಬ್ಬವಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಹಬ್ಬದ ಆಚರಣೆಗೆ ಸಕಲ ಸಿದ್ದತೆ ನಡೆದಿದೆ. ಈ ಮೊದಲು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಿದ್ದ ರಾಜ್ಯ ಸರ್ಕಾರ ಇದೀಗ ನಿಬಂಧನೆಗಳೊಂದಿಗೆ ಅನುಮತಿ ನೀಡಿದೆ.
ಹೀಗಾಗಿ ನಾನಾ ರೀತಿಯ, ವಿನ್ಯಾಸದ ಆಕರ್ಷಕ ಗಣಪತಿಗಳನ್ನು ಕಲಾವಿದರು ಸಿದ್ಧಪಡಿಸಿದ್ದು, ಮೂರ್ತಿಗಳಿಗೆ ಫೈನಲ್ ಟಚ್ ನೀಡತೊಡಗಿದ್ದಾರೆ. ಹಲವೆಡೆ ಈಗಾಗಲೇ ಗಣಪತಿಗಳು ಮಾರುಕಟ್ಟೆಗೆ ಬಂದಿದ್ದು, ವಿವಿಧ ಭಂಗಿಯಲ್ಲಿರುವ ಗಣಪತಿಗಳು ನೋಡುಗರನ್ನು ಆಕರ್ಷಿಸುತ್ತಿವೆ.
ಗಣಪತಿ ಸಂಘದವರು ಮೂರ್ತಿಯನ್ನು ಪ್ರತಿಷ್ಠಾಪಿಸಲು ಮಂಟಪ ನಿರ್ಮಾಣ ಮಾಡಿದ್ದು, ಅಂತಿಮ ತಯಾರಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬ ವಿಶೇಷವಾಗಿ ಯುವಕರ ಹಬ್ಬ. ಅದೇ ರೀತಿ ಹೆಣ್ಣು ಮಕ್ಕಳಿಗೆ ಗೌರಿಹಬ್ಬ ಅಚ್ಚುಮೆಚ್ಚಿನದು. ಎರಡು ಹಬ್ಬಗಳು ಒಟ್ಟಿಗೇ ಬರುವುದರಿಂದ ಸಂಭ್ರಮವೇ ಬೇರೆ ರೀತಿಯದು.
ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಚೌತಿಯಂದು ಗಣೇಶ ಚತುರ್ಥಿ ಬರುತ್ತದೆ. ಅಂದಿನ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಗಣಪತಿ ಮೂರ್ತಿಗಳ ತಯಾರಿಕೆ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಕೊರೊನಾ ಸಾರ್ವಜನಿಕರ ಬದುಕನ್ನು ಕಂಗೆಡಿಸಿದ್ದು, ಆರ್ಥಿಕವಾಗಿಯೂ ಹೈರಾಣಾಗಿಸಿದೆ. ಇದರ ಮಧ್ಯೆಯೂ ಹಬ್ಬದ ಆಚರಣೆಗೆ ತಯಾರಿ ನಡೆದಿದೆ.