ವೈಎಸ್‌ವಿ ದತ್ತಾ ಸದಾ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುತ್ತಾರೆ. ಅದು ಯಾವುದೋ ಪೋಸ್ಟ್ ಹಾಕೋದ್ರ ಮೂಲಕ ಅಲ್ಲ. ಮಕ್ಕಳಿಗೆ ಟ್ಯೂಷನ್ ಮಾಡುವ ಮೂಲಕ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಆದರೆ ವೈಎಸ್‌ವಿ ಬಗ್ಗೆ ಇತ್ತೀಚೆಗೆ ಹರಿದಾಡಿದ ಸುದ್ದಿ ಎಂದರೆ ದತ್ತಾ ಅವರು ಜೆಡಿಎಸ್ ಪಕ್ಷ ತೊರೆದು ಬೇರೊಂದು ಪಕ್ಷಕ್ಕೆ ಹೋಗುತ್ತಾರೆ ಎಂಬುದು. ಈ ವಿಚಾರವಾಗಿ ವೈಎಸ್‌ವಿ ಸ್ಪಷ್ಟನೆ ನೀಡಿದ್ದಾರೆ.
ಹೌದು, ಇತ್ತೀಚೆಗೆ ಆಪ್ ಪಕ್ಷದಿಂದ ವೈಎಸ್‌ವಿ ಅವರಿಗೆ ಆಹ್ವಾನ ಬಂದಿತ್ತು ಎಂದು ಹೇಳಲಾಗುತ್ತಿತ್ತು. ಆಪ್ ನಾಯಕರು ಭೇಟಿ ಮಾಡಿದ್ದನ್ನೂ ದತ್ತಾ ಅವರು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹಾಗೂ ರಾಜಕೀಯದಲ್ಲಿ ಮೊದಲಿನ ಹಾಗೆ ಸಕ್ರಿಯವಾಗಿರಲಿಲ್ಲ. ಇದರ ಬೆನ್ನಲ್ಲೇ ಮಾಧ್ಯಮಗಳು ವೈಎಸ್‌ವಿ ದತ್ತಾ ಅವರು ಜೆಡಿಎಸ್ ತೊರೆಯುತ್ತಾರೆ ಎಂದು ಸುದ್ದಿ ಬಿತ್ತರ ಮಾಡಿದ್ದವು. ಇದರಿಂದ ಬೇಸತ್ತ ವೈಎಸ್‌ವಿ ದತ್ತಾ ಸಾಮಾಜಿಕ ಜಾಲತಾಣದಲ್ಲೇ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ ವೈಎಸ್‌ವಿ ದತ್ತಾ. ನೆನ್ನೆ ರಾತ್ರಿ ತಾನೆ ದೇವೇಗೌಡರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿದೆ. ಇದರ ಜೊತೆಗೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ. ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಟಿವಿ ಅವರು ಸುದ್ದಿ ಅಂತ ಪ್ರಸಾರ ಮಾಡಿದ್ದಾರೆ. ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ..? ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ. ಜೆಡಿಎಸ್ ಪಕ್ಷ ಸಂಘಟನೆ ಕಡೆ ಗಮನ ಕೊಡೋಣ. ಮೊನ್ನೆ ಪಕ್ಷ ಸಂಘಟನೆ ಬಗ್ಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದೇನೆ ಅದರ ಕಡೆ ಗಮನ ಕೊಡೋಣ ಎಂದು ಹೇಳುವ ಮೂಲಕ ನಾನು ಯಾವ ಪಕ್ಷಕ್ಕೂ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.