ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ವಿತರಿಸುತ್ತಿರುವ ಪಡಿತರವನ್ನು ಸರಿಯಾದ ಸಮಯಕ್ಕೆ ಜನರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ ನಿಂದ ಪಡಿತರವನ್ನು ನಿಗದಿತ ಸಮಯದಲ್ಲಿ ವಿತರಣೆ ಮಾಡುತ್ತಿರುವಂತೆಯೇ ನವೆಂಬರ್ ವರೆಗೂ ಪಡಿತರ ವಿತರಿಸಬೇಕು. ಆಗಸ್ಟ್ 11 ರಿಂದ ಪಡಿತರ ವಿತರಣೆಗೆ ಸಿದ್ಧತೆ ಕೈಗೊಳ್ಳಬೇಕು. ಗೋದಾಮುಗಳಲ್ಲಿ ಅಗತ್ಯವಾದ ಪಡಿತರ ದಾಸ್ತಾನು ಖಚಿತ ಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಕೊರೋನಾ ಸೋಂಕು ಹರಡುತ್ತಿರುವ ಕಾರಣದಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ನಿಲ್ಲಿಸಲಾಗಿದೆ. ಬೆರಳಚ್ಚು ನೀಡಲು ಸಾಧ್ಯವಿಲ್ಲದ ಕಾರಣದಿಂದ ಸದ್ಯಕ್ಕೆ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಳಿಸಿದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೆಚ್ಚಿನ ಸಂಖ್ಯೆಯ ಜನ ಸ್ವಂತ ಊರುಗಳಿಗೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೋರ್ಟಿಬಿಲಿಟಿ ವ್ಯವಸ್ಥೆಯಡಿ ಅಗತ್ಯ ಪಡಿತರ ವಿತರಣೆಗೆ ಸೂಚನೆ ನೀಡಲಾಗಿದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ತಿಂಗಳಲ್ಲಿ ಪಡಿತರ ವಿತರಿಸಿದ್ದು ನವೆಂಬರ್ ವರೆಗೂ ಪಡಿತರ ವಿತರಿಸಬೇಕೆಂಬ ಬೇಡಿಕೆ ಬಂದಿದೆ. ಈ ಕುರಿತಾಗಿ ಸಿಎಂ ಜೊತೆಗೆ ಚರ್ಚೆ ನಡೆಸಿ ಕೇಂದ್ರ ಆಹಾರ ಸಚಿವರ ಜೊತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.