
ಬೆಂಗಳೂರು: ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾವಲ್ ಬೈರಸಂದ್ರ, ಕೆಜಿಹಳ್ಳಿ, ಡಿಜೆ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಮೂವರು ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿಕ ಯುವಕ ನವೀನ್ ಎಂಬಾತ ಫೇಸ್ಬುಕ್ನಲ್ಲಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎನ್ನಲಾಗಿದ್ದು ಶಾಸಕರ ಮನೆ ಬಳಿ ಸೇರಿದ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದೆ.
ಹತ್ತಾರು ಸರ್ಕಾರಿ ವಾಹನಗಳಿಗೆ, ಶಾಸಕರ ಮನೆ ಸುತ್ತಮುತ್ತಲಿನ ವಾಹನಗಳಿಗೂ ಬೆಂಕಿ ಹಚ್ಚಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.