ಬೆಂಗಳೂರು: ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ರಸಗೊಬ್ಬರದ ಕೊರತೆ ಕಂಡುಬಂದಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಸಗೊಬ್ಬರ ಸಿಗದೇ ರೈತರು ಕಂಗಾಲಾಗಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದ್ದರೂ ಬಹುತೇಕ ಮಾರಾಟ ಮಳಿಗೆಗಳಲ್ಲಿ ಗೊಬ್ಬರ ಸಿಗುತ್ತಿಲ್ಲ. ಯೂರಿಯಾಗಾಗಿ ರೈತರು ಪರದಾಡುವಂತಾಗಿದೆ. ಮಾರಾಟ ಮಳಿಗೆಗಳಲ್ಲಿ ನೋ ಸ್ಟಾಕ್ ಬೋರ್ಡ್ ಕಂಡುಬರುತ್ತಿವೆ.
ಮೆಕ್ಕೆಜೋಳ, ಹತ್ತಿ, ತೊಗರಿ, ಭತ್ತ, ಶೇಂಗಾ ಮೊದಲಾದ ಬೆಳೆಗಳು ಹೊಲದಲ್ಲಿ ಬೆಳೆದು ನಿಂತಿದ್ದು ಈ ಸಂದರ್ಭದಲ್ಲಿ ಯೂರಿಯಾ ಗೊಬ್ಬರ ಹಾಕಬೇಕಿದೆ. ಆದರೆ ಹಂಚಿಕೆಯಲ್ಲಿ ಕಡಿತ ಮತ್ತು ನಿಧಾನಗತಿಯ ಪೂರೈಕೆಯಿಂದಾಗಿ ಯೂರಿಯಾ ಸಿಗುತ್ತಿಲ್ಲ. 265 ರೂಪಾಯಿ ಬೆಲೆಯ ಒಂದು ಚೀಲ ಯೂರಿಯಾ ಕಾಳಸಂತೆಯಲ್ಲಿ 350 -550 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನು ಕೆಲವು ರೈತರು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಬಳಸುತ್ತಿರುವುದರಿಂದ ಕೊರತೆ ಕಂಡುಬಂದಿದೆ ಎನ್ನಲಾಗಿದೆ. ನಗರ ಪ್ರದೇಶದಲ್ಲಿ ಉದ್ಯೋಗ ಕಳೆದುಕೊಂಡ ಹೆಚ್ಚಿನ ಸಂಖ್ಯೆಯ ಜನ ಹಳ್ಳಿಗಳಿಗೆ ಆಗಮಿಸಿದ್ದು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಕೃಷಿ ಬೆಳೆ ಬೆಳೆಯುವ ಪ್ರದೇಶ ವಿಸ್ತಾರವಾಗಿರುವುದರಿಂದ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಅಗತ್ಯವಾದ ಗೊಬ್ಬರ ಪೂರೈಕೆ ಮಾಡಲಾಗಿದೆ ಕೆಲವರು ಹೆಚ್ಚಾಗಿ ಇವರಿಗೆ ಬಳಸುತ್ತಿರುವುದರಿಂದ ಕೊರತೆಯಾಗಿದೆ. ಈಗಾಗಲೇ ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡಿದ್ದು ಗೊಬ್ಬರ ಪೂರೈಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಗೊಬ್ಬರ ಹಾಕದಿದ್ದರೆ ಇಳುವರಿ ಕುಂಠಿತವಾಗಬಹುದೆಂದು ಹೇಳಲಾಗಿದೆ.