ಮಕ್ಕಳು ತಮ್ಮ ಅಪ್ಪ – ಅಮ್ಮನನ್ನು ನೋಡಿ ಅಥವಾ ಅವರ ಸ್ಪೂರ್ತಿಯಿಂದ ಸಾಧನೆ ಮಾಡುವುದನ್ನು ನೋಡಿದ್ದೇವೆ. ಇದೀಗ ಮಗನನ್ನು ನೋಡಿ ಓದುವ ಸ್ಪೂರ್ತಿ ಪಡೆದ ಅಪ್ಪ ಪಿಹೆಚ್‌ಡಿ ಪಡೆದಿರುವ ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ. ಅಷ್ಟೆ ಅಲ್ಲ ಅಪ್ಪ-ಮಗ ಇಬ್ಬರೂ ಒಂದೇ ವೇದಿಕೆ ಮೇಲೆ ಪಿಹೆಚ್‌ಡಿ ಅವಾರ್ಡ್ ಪಡೆಯಲಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ 63 ವರ್ಷದ ನಾಗಕೃಷ್ಣ ರಾಜೆ ಅರಸ್ ಹಾಗೂ ಅವರ ಪುತ್ರ ಪ್ರಮು ಕುಮಾರ್ ರಾಜೆ ಅರಸ್ ಒಟ್ಟಿಗೆ ಪಿಹೆಚ್‌ಡಿ ಪಡೆಯುತ್ತಿರುವ ಅಪ್ಪ – ಮಗ. ಮೈಸೂರು ವಿವಿಯು ನೂರನೇ ವರ್ಷದ ಘಟಿಕೋತ್ಸವದಲ್ಲಿ ಈ ಅಪ್ಪ – ಮಗ ಒಂದೇ ವೇದಿಕೆ ಮೇಲೆ ಪಿ.ಎಚ್.ಡಿ. ಪದವಿ ಪಡೆಯಲಿದ್ದಾರೆ. ಇಂತಹದೊಂದು ಅಪರೂಪದಲ್ಲಿ ಅಪರೂಪವಾದ ದೃಶ್ಯಕ್ಕೆ ಮೈಸೂರು ವಿವಿ ಸಾಕ್ಷಿಯಾಗಲಿದೆ.
ಅಪ್ಪ-ಮಗ ಇಬ್ಬರೂ ಡಾ.ವಿ.ಎಸ್.ಸೋಮನಾಥ್ ಮಾರ್ಗದರ್ಶನದಲ್ಲಿ ಇವರ ಪಿಹೆಚ್‌ಡಿ ಪದವಿ ಮುಗಿದಿದೆ. ಒಟ್ನಲ್ಲಿ ಮಗನ ಸ್ಪೂರ್ತಿಯಿಂದ ತಂದೆಯೂ ಓದು ಮುಂದುವರೆಸಿದ್ದು ನಿಜಕ್ಕೂ ಖುಷಿಯ ಸಂಗತಿ. ಕಲಿಯುವ ಆಸಕ್ತಿ ಇದ್ದರೆ ವಯಸ್ಸಿನ ಪ್ರಶ್ನೆ ಇರುವುದಿಲ್ಲ ಎಂಬುವುದನ್ನು ನಾಗಕೃಷ್ಣ ರಾಜೆ ಅರಸ್ ತೋರಿಸಿದ್ದಾರೆ.