ಬೆಂಗಳೂರು: ಸರ್ಕಾರದಿಂದ ರೈತರಿಗೆ ಬೆಳೆ ವಿಮೆ, ಸಬ್ಸಿಡಿ ಮೊದಲಾದ ಸೌಲಭ್ಯ ಪಡೆಯಲು ಬೆಳೆಗಳ ವಿವರ ದಾಖಲಿಸಬೇಕಿದೆ. ನನ್ನ ಬೆಳೆ ನನ್ನ ಹಕ್ಕು ಘೋಷವಾಕ್ಯದಡಿ ರೈತರು ಬೆಳೆಯುವ ಬೆಳೆ ವಿವರವನ್ನು ಕೃಷಿ ಇಲಾಖೆಯ ಮೊಬೈಲ್ ಆಪ್ ನಲ್ಲಿ ಅಪ್ ಲೋಡ್ ಮಾಡಲು ತಿಳಿಸಲಾಗಿದೆ.
ಇದುವರೆಗೆ 73 ಲಕ್ಷ ರೈತರು ಬೆಳೆಯ ವಿವರ ನೀಡಿದ್ದಾರೆ. ಇನ್ನೂ 1.37 ಕೋಟಿ ರೈತರ ಜಮೀನಿನಲ್ಲಿ ಬೆಳೆಗಳ ಸಮೀಕ್ಷೆ ನಡೆಯಬೇಕಿದೆ. ಕೆಲವೆಡೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇರುವ ಕಾರಣ ರೈತರಿಗೆ ತೊಂದರೆಯಾಗಿದೆ. ಹೀಗಾಗಿ ಖಾಸಗಿ ಸಂಸ್ಥೆಯ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾಹಿತಿ ನೀಡಿದ್ದಾರೆ.
ಇನ್ನು ಸಹಕಾರ ಸಂಘಗಳ ಮೂಲಕವೂ ರೈತರಿಗೆ ಅಗತ್ಯವಾದಷ್ಟು ಗೊಬ್ಬರ ವಿತರಿಸಲಾಗುವುದು. ಕಾಳಸಂತೆಯಲ್ಲಿ ಗೊಬ್ಬರ ಮಾರಾಟಕ್ಕೆ ಬ್ರೇಕ್ ಹಾಕಿ ಬೇಡಿಕೆ ಇರುವಷ್ಟು ಗೊಬ್ಬರವನ್ನು ರೈತರಿಗೆ ಪೂರೈಕೆ ಮಾಡಲಾಗುವುದು. ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಳ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.