ವಾಹನ ಸಾಲಕ್ಕಾಗಿ ನಕಲಿ ದಾಖಲೆ ನೀಡಿ ಬ್ಯಾಂಕಿಗೆ ವಂಚಿಸಲು ಯತ್ನಿಸಿದ ವೈದ್ಯೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪಿಯನ್ನು ಕಾಪು ಕಟಪಾಡಿ ಪೊಲೀಸರು ಬಂಧಿಸಿದ್ದಾರೆ.
ಉಪ್ಪೂರು ಸಾಲ್ಮರ ಮನೆ ನಿವಾಸಿಯಾಗಿರುವ 37 ವರ್ಷದ ವೈದ್ಯೆ ಮತ್ತು ಸಾಲಿಗ್ರಾಮ ಚಿತ್ರಪಾಡಿ ನಿವಾಸಿಯಾಗಿರುವ 43 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ವೈದ್ಯೆ ಜುಲೈ 3ರಂದು ಶಂಕರಪುರದ ಬ್ಯಾಂಕ್ ಆಫ್ ಬರೋಡಾ ಮೂಡಬೆಟ್ಟು ಶಾಖೆಗೆ ತೆರಳಿ ನಾನು ಮಣಿಪಾಲ ಕಸ್ತೂರಬಾ ಆಸ್ಪತ್ರೆಯಲ್ಲಿ ವೈದ್ಯೆ ಮತ್ತು ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ವಾಹನ ಖರೀದಿಗೆ 7.8 ಲಕ್ಷ ರೂಪಾಯಿ ಮತ್ತು ತನ್ನ ಸಹೋದರನಿಗೆ 16 ಲಕ್ಷ ರೂಪಾಯಿ ಸಾಲ ಕೊಡುವಂತೆ ಕೇಳಿದ್ದಾರೆ.
ಇದಕ್ಕಾಗಿ ಆದಾಯದ ದಾಖಲೆ, ಸ್ಯಾಲರಿ ಸ್ಲಿಪ್, ತೆರಿಗೆ ಮಾಹಿತಿಯನ್ನು ನೀಡಿ, ವಾಹನ ಶೋರೂಮ್ ಗಳ ದರಪಟ್ಟಿ ಕೂಡ ಸಲ್ಲಿಸಿದ್ದಾರೆ. ಸಾಲಕ್ಕಾಗಿ ಅರ್ಜಿ ಪಡೆದುಕೊಂಡ ಬ್ಯಾಂಕ್ ಸಿಬ್ಬಂದಿ ಸಂಬಂಧಿಸಿದ ಸಂಸ್ಥೆಯಲ್ಲಿ ವಿಚಾರಿಸಿದಾಗ ವೈದ್ಯೆ ಅಲ್ಲಿ ಕೆಲಸ ಮಾಡದಿರುವುದು ಗೊತ್ತಾಗಿದೆ. ಬ್ಯಾಂಕ್ ವ್ಯವಸ್ಥಾಪಕರು ಕಾಪು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೈದ್ಯೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.