ಬೀದರ್: ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿ, ಮನೆಗಳು ಕುಸಿದಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರು, ಸಂತ್ರಸ್ತರ ನೆರವಿಗೆ ಮುಂದಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆರೆಯಿಂದ ಭಾರೀ ಹಾನಿಯಾಗಿದ್ದರೂ ರಾಜ್ಯ ಬಿಜೆಪಿ ಸರ್ಕಾರ ತನ್ನ ಕೆಲಸ ಏನೆಂಬುದನ್ನು ಮರೆತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡುತ್ತಿಲ್ಲ. ರೈತರು, ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಇವರ ಚಿತ್ತ ಕೇವಲ ಉಪಚುನಾವಣೆಯತ್ತ ಮಾತ್ರವಿದೆ ಎಂದು ದೂರಿದ್ದಾರೆ.
ರೈತರ ಕಷ್ಟ ಏನೆಂದು ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಬಿಜೆಪಿ ಸರ್ಕಾರ ಕಣ್ಣು, ಕಿವಿ, ಮೂಗು, ಹೃದಯವಿಲ್ಲದ ಸರ್ಕಾರವಾಗಿದೆ. ಸಂತ್ರಸ್ತರಿಗೆ ಸೌಕರ್ಯ ಕಲ್ಪಿಸುವ ಕೆಲಸ ಮಾಡುತ್ತಿಲ್ಲ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿಯ ವೇಳೆ ತನ್ನ ಕೆಲಸ ಏನು ಎಂಬುದನ್ನು ಬಿಜೆಪಿ ಸರ್ಕಾರ ಮರೆತಿದೆ ಎಂದು ಟೀಕಿಸಿದ್ದಾರೆ.