ಬೆಂಗಳೂರು: ವನ್ಯಜೀವಿ ಸಂರಕ್ಷಣೆಗಾಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೀಡಿರುವ ಕೊಡುಗೆ ಹಿನ್ನಲೆಯಲ್ಲಿ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಆನೆ ಮರಿಯೊಂದಕ್ಕೆ ಸುಧಾ ಮೂರ್ತಿ ಹೆಸರಿಡಲಾಗಿದೆ.
ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 45 ವರ್ಷದ ಸುವರ್ಣ ಎಂಬ ಆನೆ, ಹೆಣ್ಣು ಮರಿಗೆ ಜನ್ಮ ನೀಡಿದ್ದು, ಈ ಆನೆ ಮರಿಗೆ ಸುಧಾ ಮೂರ್ತಿ ಅವರ ಹೆಸರಿಡಲಾಗಿದೆ. ಈ ಆನೆ ಮರಿಯ ಜತೆಗೆ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಮರಿ ಆನೆಗೆ ಹೆಸರು ಸೂಚಿಸುವಂತೆ ಆನ್ ಲೈನ್ ನಲ್ಲಿ ಮನವಿ ಮಾಡಿದ್ದರು. ಈ ವೇಳೆ ಸಾರ್ವಜನಿಕರು ಸುಧಾ ಮೂರ್ತಿ ಹೆಸರು ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಆನೆ ಮರಿಗೆ ಸುಧಾ ಎಂದು ನಾಮಕರಣ ಮಾಡಿದ್ದಾಗಿ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ಬಿಪಿನ್ ಸಿಂಗ್ ತಿಳಿಸಿದ್ದಾರೆ.