ಬೆಂಗಳೂರು: ಕೇಂದ್ರ ಗೃಹ ಮಂತ್ರಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್-19 ನಿಯಂತ್ರಣಕ್ಕಾಗಿ ಕಾಲಕಾಲಕ್ಕೆ ಮಾರ್ಗಸೂಚಿ ಹೊರಡಿಸುತ್ತಿವೆ.
ಅಂತೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ನಿಟ್ಟಿನಲ್ಲಿ ಉಪಚುನಾವಣೆ ವೇಳೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ಮಾರ್ಗಸೂಚಿ ನೀಡಲಾಗಿದೆ. ಚುನಾವಣೆಯಲ್ಲಿ ನಿರತರಾಗಿರುವ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಚುನಾವಣಾ ಕಾರ್ಯಕ್ಕೆ ಬಳಸುವ ಕೊಠಡಿಯನ್ನು ಪ್ರವೇಶಿಸುವ ಮೊದಲು ಕೈಗಳನ್ನು ಸ್ಯಾನಿಟೈಸರ್ ನಿಂದ ಶುಚಿಗೊಳಿಸಬೇಕು. ಥರ್ಮಲ್ ಸ್ಕ್ಯಾನರ್ ನಿಂದ ಪರೀಕ್ಷಿಸಿಕೊಳ್ಳುವುದು ಕಡ್ಡಾಯವಾಗಿದೆ.
ನೇಮಕಾತಿ ಮಾಡಲಾದ ಚುನಾವಣಾಧಿಕಾರಿಗಳಿಗೆ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಹಾಗೂ ಮೀಸಲು ಚುನಾವಣಾಧಿಕಾರಿಗಳಿಗೆ ಒಂದೇ ಬಾರಿಗೆ ತರಬೇತಿ ನೀಡದೇ ತಂಡಗಳನ್ನು ರಚಿಸಿ ತರಬೇತಿ ನೀಡಬೇಕಿದೆ.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಒಬ್ಬ ಸೂಚಕನ ಮೂಲಕ ಮಾತ್ರ ನಿಗದಿತ ಸಮಯದೊಳಗೆ ನಾಮಪತ್ರ ಸಲ್ಲಿಸಬೇಕಿದೆ. ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಅಥವಾ ಆತನ ಒಬ್ಬ ಸೂಚಕ ಮಾತ್ರ ಕೊಠಡಿಯೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.
ಕೊರೋನಾ ಪಾಸಿಟಿವ್ ಇರುವ ವ್ಯಕ್ತಿ ನಾಮಪತ್ರ ಸಲ್ಲಿಸಲು ಇಚ್ಚಿಸಿದಲ್ಲಿ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತ ಚುನಾವಣೆ ಆಗಿರುವುದರಿಂದ ಗರಿಷ್ಠ ಐದು ಜನ ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬಹುದಾಗಿದೆ. ಪ್ರಚಾರಕ್ಕೆ ಕರಪತ್ರ ಹಂಚಬಹುದು. ಗುಂಪುಗುಂಪಾಗಿ ಪ್ರಚಾರ ಮಾಡುವಂತಿಲ್ಲ ಎಂಬುದು ಸೇರಿದಂತೆ ಹಲವು ನಿಬಂಧನೆಗಳನ್ನು ತಿಳಿಸಲಾಗಿದೆ.