ಬೆಂಗಳೂರು: ಕಳೆದ 15 ದಿನಗಳಿಂದ ಮುಗಿಲು ಮುಟ್ಟಿದ್ದ ಪ್ರಚಾರದ ಭರಾಟೆಗೆ ತೆರೆ ಬಿದ್ದಿದೆ. ನವೆಂಬರ್ 3 ರಂದು ಮತದಾನ ನಡೆಯಲಿರುವ ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
ಮನೆಮನೆ ಪ್ರಚಾರ ನಡೆಸಬಹುದಾಗಿದ್ದು, ಕ್ಷೇತ್ರದ ಹೊರಗಿನವರು ಕ್ಷೇತ್ರವನ್ನು ಬಿಟ್ಟು ತೆರಳುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ. ನಾಯಕರ ನಡುವೆ ಆರೋಪ-ಪ್ರತ್ಯಾರೋಪ, ಟೀಕೆ, ವ್ಯಂಗ್ಯ, ವಾಕ್ಸಮರ ಜೋರಾಗಿಯೇ ನಡೆದಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವುದರೊಂದಿಗೆ ವಾಕ್ಸಮರಕ್ಕೆ ತೆರೆಬಿದ್ದಿದೆ.
ಕೊನೆ ಕ್ಷಣದವರೆಗೂ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು, ನಾಯಕರು, ಮುಖಂಡರು, ಕಾರ್ಯಕರ್ತರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇಂದು ಮತ್ತು ನಾಳೆ ಮತದಾರರ ಮನೆಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ಚುನಾವಣೆಯ ಗೆಲುವು ಸೋಲಿನ ಲೆಕ್ಕಾಚಾರ ಕೊನೆಯ 2 ದಿನಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇವೆರಡು ದಿನಗಳು ಬಹು ಮುಖ್ಯವಾಗಿರುವುದರಿಂದ ಮತದಾರರ ಸೆಳೆಯಲು ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸಲಾಗುತ್ತಿದೆ.