ಬೆಂಗಳೂರು: ರಾಷ್ಟ್ರೀಯ ಮಾದಕವಸ್ತು ನಿಗ್ರಹ ಘಟಕ(ಎನ್.ಸಿ.ಬಿ.) ಅಧಿಕಾರಿಗಳು ಬಂಧಿಸಿರುವ ಡ್ರಗ್ಸ್ ದಂಧೆಯ ರೂವಾರಿ ಅನಿಕಾ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು ಎನ್ನುವುದು ಗೊತ್ತಾಗಿದೆ.
ಅಧಿಕಾರಿಗಳು ಬಂಧಿಸಿದ ಸಂದರ್ಭದಲ್ಲಿ ನಶೆಯಲ್ಲಿದ್ದ ಅನಿಕಾ ಕಳೆದ ಆರು ವರ್ಷಗಳಿಂದ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ. ಎನ್.ಸಿ.ಬಿ. ಅಧಿಕಾರಿಗಳು ಗುರುವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದು ಕಿಂಗ್ ಪಿನ್ ಅನಿಕಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
145 ಡ್ರಗ್ಸ್ ಮಾತ್ರೆಗಳು ಮತ್ತು 2.30 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಅನಿಕಾ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳಲ್ಲದೇ ಆಕೆಯು ಕೂಡ ವ್ಯಸನಿಯಾಗಿದ್ದಳು. ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ನಶೆಯಲ್ಲಿದ್ದಳು ಎನ್ನುವುದು ತಿಳಿದುಬಂದಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ನಲ್ಲಿ ಓದಿರುವ ಅನಿಕಾ ವಿದ್ಯಾರ್ಥಿನಿಯಾಗಿದ್ದಾಗಲೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರ ಮಕ್ಕಳು ಮತ್ತು ಕೆಲವು ನಟರಿಗೆ ಡ್ರಗ್ಸ್ ಪೂರೈಕೆ ಮಾಡಿದ್ದಾಳೆ ಎನ್ನಲಾಗಿದೆ.