ಬೆಂಗಳೂರು: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆಯಾಗಿದ್ದು ಬೆಂಗಳೂರು ತಲಘಟ್ಟಪುರ ಠಾಣೆ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಡ್ರೋನ್ ಪ್ರತಾಪ್ ನಾಪತ್ತೆಯಾಗಿದ್ದರು. ಅಂಜನಾಪುರದ ಫ್ಲ್ಯಾಟ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದರೂ ಅವರು ನಿಯಮ ಉಲ್ಲಂಘಿಸಿ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಭಾಗಿಯಾಗಿದ್ದರು.
ಕೈಮೇಲೆ ಸೀಲ್ ಇದ್ದರೂ ನಿಯಮ ಉಲ್ಲಂಘಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ಅವರ ವಿರುದ್ಧ ಸಾಂಕ್ರಾಮಿಕ ರೋಗ ಹರಡಿದ, ನಿಯಮ ಉಲ್ಲಂಘನೆ ಆರೋಪದಡಿ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಲಾಗಿತ್ತು. ಪೊಲೀಸರು ನಾಪತ್ತೆಯಾಗಿದ್ದ ಅವರಿಗಾಗಿ ಹುಡುಕಾಟ ನಡೆಸಿದ್ದು, ಮೈಸೂರಿನ ಸಂಬಂಧಿಕರೊಬ್ಬರ ಮನೆಯಲ್ಲಿ ತಂಗಿದ್ದ ಪ್ರತಾಪ್ ನನ್ನು ತಲಘಟ್ಟಪುರ ಠಾಣೆ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡಿದೆ. ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಿ ಅವಧಿ ಮುಗಿದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.