ಬೆಂಗಳೂರು: ಕೊರೊನಾದಿಂದ ಗುಣಮುಖರಾವರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಕೋವಿಡ್-19 ಟೆಸ್ಟಿಂಗ್ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಅವರು ಸಭೆ ನಡೆಸಿದರು.
ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊರೊನಾದಿಂದ ಗುಣಮುಖರಾಗಿದ್ದ 27 ವರ್ಷದ ಮಹಿಳೆಗೆ ಮತ್ತೊಮ್ಮೆ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಇತರೆ ರಾಷ್ಟ್ರಗಳಲ್ಲೂ ಈ ರೀತಿಯ ಪ್ರಕರಣಗಳು ಕಂಡು ಬಂದಿವೆ. ಇದಕ್ಕೆ ಒಂದೊಂದು ದೇಶದಲ್ಲೂ ಒಂದೊಂದು ರೀತಿ ಕಾರಣ ಕೇಳಿ ಬಂದಿವೆ. ನಮ್ಮಲ್ಲೂ ಇಂಥ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕದ ವಿಷಯ. ಆದರೆ, ಇದನ್ನು ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸುವ ಮೂಲಕ ಜನರಲ್ಲಿ ಮತ್ತೊಮ್ಮೆ ಕೊರೊನಾ ಬಾಧಿಸುತ್ತದೆ ಎಂಬ ಆತಂಕ ದೂರ ಮಾಡಬೇಕು ಎಂದು ತಿಳಿಸಿದ್ದಾರೆ.
ಕೋವಿಡ್‌ನಿಂದ ಗುಣಮುಖರಾದವರ ದೇಹದಲ್ಲಿ ಬಿಳಿರಕ್ತ ಕಣಗಳ ಮರು ಉತ್ಪಾದನೆಗೆ ಕನಿಷ್ಠ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಕೆಲವರಿಗೆ ಸೋಂಕು ಮತ್ತೊಮ್ಮೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಇದೇ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗದು ಎಂದು ಸಭೆಯಲ್ಲಿ ತಜ್ಞರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮತ್ತೊಮ್ಮೆ ಕೊರೊನಾ ಸೋಂಕು ಕಾಣಿಸಿಕೊಳ್ಳಲು ಕಾರಣ ಏನು ಎಂಬುದರ ಬಗ್ಗೆ ನಿಖರತೆ ಬೇಕು. ಜೊತೆಗೆ ಇತರೆ ರಾಜ್ಯಗಳಲ್ಲಿ ಇಂಥ ಪ್ರಕರಣಗಳಲ್ಲಿ ಅಳವಡಿಸಿಕೊಂಡಿರುವ ಚಿಕಿತ್ಸಾ ಕ್ರಮದ ಬಗ್ಗೆ ಶೀಘ್ರವೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಅಷ್ಟೆ ಅಲ್ಲದೆ, ಕೋವಿಡ್‌ನಿಂದ ಗುಣಮುಖರಾದವರ ಮೇಲೆ ಯಾವ ರೀತಿ ನಿಗಾ ವಹಿಸಲಾಗುತ್ತಿದೆ..? ಅವರು ಅನುಸರಿಸಬೇಕಾದ ಎಚ್ಚರಿಕೆ ಹಾಗೂ ಇತರೆ ಕ್ರಮಗಳ ಬಗ್ಗೆ ಯಾವ ರೀತಿ ಅರಿವು ಮೂಡಿಸಲಾಗಿದೆ ಎಂಬ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಬೂತ್ ಮಟ್ಟದ ಸಮಿತಿಗೆ ಜವಾಬ್ದಾರಿ:
ಕೋವಿಡ್ ನಿಯಂತ್ರಣ ಬೂತ್‌ಮಟ್ಟದಿಂದ ಮಾತ್ರ ಸಾಧ್ಯ ಎಂಬುದನ್ನು ಮೊದಲಿನಿಂದ ಪ್ರತಿಪಾದಿಸಿದ್ದೇವೆ. ಬೂತ್ ಮಟ್ಟದಲ್ಲಿ ಸಮಿತಿ ರಚಿಸಿ, ಜಾಗೃತಿ ಮೂಡಿಸುವುದು ಹಾಗೂ ಕೊರೋನಾ ಪರೀಕ್ಷೆ ನಡೆಸುವುದರಿಂದ ಸುಲಭವಾಗಿ ಸೋಂಕು ಹರಡುವಿಕೆ ನಿಯಂತ್ರಣ ಸಾಧ್ಯ. ಈ ಜವಾಬ್ದಾರಿಯನ್ನು ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ವಹಿಸಿದರೆ ಇದರ ನಿರ್ವಹಣೆ ಸುಲಭ ಎಂದು ತಿಳಿಸಿದ್ದಾರೆ.