ಬೆಂಗಳೂರು ಹೊರವಲಯದಲ್ಲಿ ರಾಜ್ಯ ಸರ್ಕಾರ ಕೋವಿಡ್ನಿಂದ ಮೃತರಾದವರ ಸಾಮೂಹಿಕ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿತ್ತು. ಆದರೆ ಇದರಲ್ಲಿಯೂ ಪ್ರಚಾರವನ್ನ ಪಡೆಯಲು ಹೊರಟ ಬಿಜೆಪಿ ನಾಯಕರು ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಬಂದವರಿಗೆ ಉಚಿತ ಉಪಹಾರದ ವ್ಯವಸ್ಥೆ ಇದೆ ಎಂಬ ಫ್ಲೆಕ್ಸ್ ಹಾಕಲು ಹೋಗಿ ಭಾರೀ ಮುಖಭಂಗಕ್ಕೆ ಈಡಾಗಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ಫ್ಲೆಕ್ಸ್ ಭಾರೀ ವ್ಯಾಪಕ ವಿರೋಧ ವ್ಯಕ್ತವಾಗ್ತಿದ್ದಂತೆಯೇ ಕಟೌಟ್ನ್ನು ತೆರವುಗೊಳಿಸಲಾಗಿದೆ. ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ.
ಇದು ನಾಯಕರ ಪರಮ ಅಸಹ್ಯತನದ ಪರಮಾವಧಿಯಾಗಿದೆ. ಚಿತೆಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಹೀನ ಬುದ್ಧಿಯನ್ನ ತೋರಿಸುವ ಮೂಲಕ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಜನರ ಸಾವನ್ನೂ ಪ್ರಚಾರಕ್ಕೆ ಬಳಸಿಕೊಳ್ಳುವ ಬಿಜೆಪಿ ನಾಯಕರಲ್ಲಿ ಮನುಷ್ಯತ್ವ ಸತ್ತು ಹೋಗಿದೆಯೇ..? ಎಂದು ಟ್ವೀಟಾಯಿಸಿದ್ದಾರೆ.
ಗಿಡ್ಡೇನಹಳ್ಳಿಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ನಲ್ಲಿ ಕೋವಿಡ್ ಶವಗಳಿಗೆ ಸಕಲ ಸರ್ಕಾರಿ ಮರ್ಯಾದೆಯಿಂದ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಈ ಕಾರ್ಯಕ್ಕೆ ಬಂದವರಿಗೆ ಉಚಿತ ನೀರು, ಕಾಫಿ, ಟೀ ಹಾಗೂ ತಿಂಡಿ ವ್ಯವಸ್ಥೆ ಇದೆ ಎಂದು ಬರೆಯಲಾಗಿತ್ತು. ಹಾಗೂ ಈ ಫ್ಲೆಕ್ಸ್ನಲ್ಲಿ ಪ್ರಧಾನಿ ಮೋದಿ, ಸಿಎಂ ಬಿಎಸ್ವೈ, ಸಚಿವ ಆರ್. ಅಶೋಕ್, ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್, ಮರಿಸ್ವಾಮಿ ಹಾಗೂ ಎಸ್. ಮಲ್ಲಯ್ಯರ ಭಾವಚಿತ್ರವನ್ನ ಹಾಕಲಾಗಿತ್ತು.