ಧಾರವಾಡ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
38 ವರ್ಷದ ಪೀರ್ ಸಾಬ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಪೀರ್ ಸಾಬ್ ನ ಪತ್ನಿ ಫರ್ವೀನ್ ಬಾನು ಅದೇ ಗ್ರಾಮದ ಸೋಮಯ್ಯ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಮೂರು ವರ್ಷದಿಂದ ಇವರ ನಡುವೆ ಅಕ್ರಮ ಸಂಬಂಧವಿರುವ ವಿಚಾರ ಗೊತ್ತಾದ ಪೀರ್ ಸಾಬ್ ಪತ್ನಿಗೆ ಬುದ್ಧಿವಾದ ಹೇಳಿದ್ದಾನೆ.
ಗಂಡನನ್ನು ಕೊಲೆ ಮಾಡಲು ತೀರ್ಮಾನಿಸಿದ ಫರ್ವಿನ್ ಬಾನು, ಪ್ರಿಯಕರನ ನೆರವಿನಿಂದ ಪತಿಯನ್ನು ಕೊಲೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪೀರ್ ಸಾಬ್ ಏಕಾಏಕಿ ನಾಪತ್ತೆಯಾಗಿದ್ದು ಆತನ ತಾಯಿ ಪೊಲೀಸರಿಗೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಪತ್ನಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಎಂಕೆ ಹುಬ್ಬಳ್ಳಿ ಸಮೀಪ ಮಲಪ್ರಭಾ ನದಿಯ ಬಳಿಗೆ ಪೀರ್ ಸಾಬ್ ನನ್ನು ಕರೆದುಕೊಂಡು ಹೋದ ಪತ್ನಿ ಹಾಗೂ ಪ್ರಿಯಕರ ವಿಪರೀತ ಮದ್ಯ ಕುಡಿಸಿ ಕೊಲೆಮಾಡಿ ನದಿಗೆ ಮೃತದೇಹ ಎಸೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ವ್ಯಕ್ತಿಯ ಪತ್ನಿ, ಪ್ರಿಯಕರ ಮತ್ತು ಕೊಲೆಗೆ ಸಹಕಾರ ನೀಡಿದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.