ಸುಳ್ಯ: ದೇವರಗುಂಡಿ ಜಲಪಾತದಲ್ಲಿ ಅರೆಬೆತ್ತಲಾಗಿ ಫೋಟೋ ಶೂಟ್ ಮಾಡಿ ಜನರ ಧಾರ್ಮಿಕ ಭಾವನೆಗೆ ದಕ್ಕೆಯುಂಟುಮಾಡಿದ್ದಾರೆ ಎಂದು ಇಬ್ಬರು ರೂಪದರ್ಶಿಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೋಡಿಕಾನ ದೇವರಗುಂಡಿ ಜಲಪಾತ ಸ್ಥಳೀಯರ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದೆ. ದೇವರಗುಂಡಿ ಜಲಪಾತದ ಸಮೀಪವೇ ಪುರಾತನ ದೇಗುಲವಾದ ಶ್ರೀ ಮಲ್ಲಿಕಾರ್ಜುನ ದೇವಾಲಯವಿದೆ. ದೇವರಗುಂಡಿ ಜಲಪಾತ ದೇವರಿಂದಲೇ ನಿರ್ಮಿತವಾದ ಪ್ರದೇಶ ಎಂಬುದು ಅಲ್ಲಿನ ಸ್ಥಳೀಯರ ನಂಬಿಕೆ. ದೇವಾಲಯದ ಪವಿತ್ರ ಪ್ರದೇಶದಲ್ಲಿನ ದೇವರಗುಂಡಿ ಫಾಲ್ಸ್ ನಲ್ಲಿ ಈಗ ಫೋಟೋ ಶೂಟ್ ಮಾಡಿರುವುದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.
ಮಾಡೆಲ್ ಬೃಂದಾ ಅರಸ್ ಹಾಗೂ ಇನ್ನೋರ್ವ ರೂಪದರ್ಶಿ ದೇವರಗುಂಡಿ ಜಲಪಾತದಲ್ಲಿ ಅರೆಬೆತ್ತಲಾಗಿ ನಿಂತು ಫೋಟೋಗಳಿಗೆ ಪೋಸ್ ನೀಡುತ್ತಾ ಫೋಟೋ ಶೂಟ್ ಮಾಡಿದ್ದಾರೆ. ಇಬ್ಬರು ರೂಪದರ್ಶಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ದೇವಾಲಯದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.