ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಗೆ ದೌಡಾಯಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ದೆಹಲಿಗೆ ಹೋಗಿರಬಹುದು ಎಂದೆಲ್ಲಾ ಹೇಳಲಾಗಿತ್ತು. ಆದರೆ, ಈ ಎಲ್ಲ ಊಹಾಪೋಹಗಳಿಗೆ ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತೆರೆ ಎಳೆದಿದ್ದಾರೆ.
ಕೇಂದ್ರ ಸಚಿವರ ಭೇಟಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಮತಿ ಪಡೆದುಕೊಂಡು ದೆಹಲಿಗೆ ಆಗಮಿಸಿದ್ದೇನೆ. ಯಾವುದೇ ರಾಜಕೀಯ ಚಟುವಟಿಕೆ ಉದ್ದೇಶದಿಂದ ಬಂದಿಲ್ಲ. ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.
ರಾಜ್ಯಪಾಲರ ಭೇಟಿಗಾಗಿ ದೆಹಲಿಗೆ ಆಗಮಿಸಿದ್ದು ಅವರ ಆರೋಗ್ಯ ವಿಚಾರಿಸಿದ್ದೇನೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರ ಭೇಟಿಗೆ ಸಮಯ ಕೋರಲಾಗಿದೆ. ಅಲ್ಲದೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ತರುವ ವಿಚಾರದ ಕುರಿತಾಗಿ ಚರ್ಚೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸುವುದಾಗಿ ಅವರು ತಿಳಿಸಿದ್ದಾರೆ.