ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ 52 ವರ್ಷದ ಸಂಗೀತ ಶಿಕ್ಷಕ 23 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ದಿಲ್ಶಾದ್ ಗಾರ್ಡನ್ ನಿವಾಸಿಯಾಗಿರುವ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಿದಮ್ ಇನ್ಸ್ಟ್ರುಮೆಂಟ್ ಶಿಕ್ಷಕನಾಗಿದ್ದು, ಅನುಚಿತವಾಗಿ ಸ್ಪರ್ಶಿಸಿ ವಾಟ್ಸಾಪ್ನಲ್ಲಿ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ. ಚಾಣಕ್ಯಪುರಿ ಠಾಣೆ ಪೊಲೀಸರಿಗೆ ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿ ಡಿಸೆಂಬರ್ 14 ರಂದು ದೂರು ನೀಡಿದ್ದಾರೆ.
ತರಬೇತಿಯ ಅವಧಿಯಲ್ಲಿ ಶಿಕ್ಷಕ ಅನುಚಿತವಾಗಿ ಸ್ಪರ್ಶಿಸಿದ್ದ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಸೊಂಟಕ್ಕೆ ಕೈಹಾಕಿ ಹಣೆ ಮೇಲೆ ಮುತ್ತಿಟ್ಟ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ನವದೆಹಲಿ ಡಿಸಿಪಿ ಐಶ್ ಸಿಂಘಾಲ್ ತಿಳಿಸಿದ್ದು, ಬೇರೆ ವಿದ್ಯಾರ್ಥಿಗಳ ಹೇಳಿಕೆಗಳನ್ನು ಕೂಡ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.