ಅಂಟಿಕೆ-ಪಂಟಿಕೆ,
ಎಂಟುಕಾಳ್ ದೀಪ,
ಎಣ್ಣೆ ಬೀಡೇ ದ್ಯಾಮವೋ ದ್ಯಾಮವ್ವೋ,
ಆಚೆ ಮನೆಗ್ಹೋಗೋಳೇ
ಈಚೆ ಮನೆಗ್ಹೋಗೋಳೇ….ಈ ಸಾಲುಗಳು ಓದಿದರೆ ಸಾಕು ಇದು ದೀಪಾವಳಿಯಲ್ಲಿ ಮಕ್ಕಳು ರಾತ್ರಿಯ ವೇಳೆ ಹಣತೆ ಹಚ್ಚಿಕೊಂಡು ಮನೆಯಿಂದ ಮನೆಗೆ ಅಂಟಿಕೆ-ಪಂಟಿಕೆ ಹಾಡುಗಳನ್ನು ಹೇಳುತ್ತಾ, ದೀಪಕ್ಕೆ ಎಣ್ಣೆ ಬಿಡಿಸಿಕೊಳ್ಳುತ್ತಾ ಜೊತೆಗೆ ಕಾಸನ್ನು ಪಡೆದುಕೊಂಡು ಸಂಭ್ರಮದಲ್ಲಿ ಇರುವ ದೃಶ್ಯ ಎಂದು.
ಹೌದು, ದೀಪಾವಳಿ ಒಂದು ಸಂಭ್ರಮದ, ಸಂತಸದ, ದೀಪದ ಹಬ್ಬ. ಇಂತಹ ಸುಂದರ ಗೀತ ಸಂಪ್ರದಾಯದ ಅಂಟಿಕೆ-ಪಂಟಿಕೆ ಹಾಡು ಇತ್ತೀಚೆಗೆ ಮರೆಯಾಗುತ್ತಿದೆ. ಹಬ್ಬಗಳೇ ಬದಲಾಗುತ್ತಿದ್ದು, ಸಂಭ್ರಮಗಳೇ ಇಲ್ಲದಿರುವಾಗ ಇವುಗಳ ನೆನಪಷ್ಟೇ ನಮ್ಮನ್ನು ಒಂದು ವಿಚಿತ್ರ ಲೋಕಕ್ಕೆ ಕರೆದೊಯ್ಯಲು ಸಾಧ್ಯ. ದೀಪಾವಳಿ ಎಂದರೆ ಹಳ್ಳಿಗಳಲ್ಲಿ ಒಂದು ವಿಶಿಷ್ಟ ಆಚರಣೆ. ಇದನ್ನು ದೀವಳಿಗೆ, ಹಟ್ಟಿ ಹಬ್ಬ, ಬೆಳಕಿನ ಹಬ್ಬ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಅನೇಕ ಸಂಪ್ರದಾಯಗಳು ದೀಪಾವಳಿಯಲ್ಲಿ ಇದ್ದವು.
ಎಣ್ಣೆ ಸ್ನಾನ, ಕೆರಕನ್ನ ಇಡುವುದು, ದೀಪಗಳನ್ನು ಹಚ್ಚುವುದು. ಹೋರಿ ಬೆದರಿಸುವುದು, ಲಕ್ಷ್ಮೀಪೂಜೆ, ಚುಟುಕಿ ಹಾಕುವುದು, ಪಂಜಿನ ಆಟ, ವರ್ಷದ ತೊಡಕು, ಹಿರಿಯರ ಪೂಜೆ, ಗಳೇವು ಪೂಜೆ, ನಾಟಕ, ಪಟಾಕಿ ಹೀಗೆ ಎಲ್ಲ ವಿಶೇಷತೆಗಳು ಈ ದೀಪಾವಳಿ ಹಬ್ಬದಲ್ಲಿ ಸೇರಿಕೊಳ್ಳುತ್ತವೆ. ಆದರೆ ಇಂದಿನ ಮಕ್ಕಳಿಗೆ ಇವುಗಳ ಪರಿಚಯವೇ ಆಗದಿರುವುದು ಮಾತ್ರ ವಿಷಾದದ ಸಂಗತಿ. ಯಾಂತ್ರೀಕೃತ ಬದುಕಿನಲ್ಲಿ ಇದೆಲ್ಲವೂ ಮರೆಯಾಗುತ್ತಿರುವುದು ದುರ್ದೈವದ ಸಂಗತಿಯೂ ಹೌದು.