ಬೆಂಗಳೂರಿನ ಸುಂಕದಕಟ್ಟೆ ನಿವಾಸಿಯಾಗಿರುವ 10 ದಿನಗಳ ಬಾಣಂತಿ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದರೂ ಸಿಬ್ಬಂದಿ ಬೆಡ್ ಇಲ್ಲವೆಂದು ಚಿಕಿತ್ಸೆ ನೀಡದ ಕಾರಣದಿಂದಾಗಿ ತೀವ್ರ ಅಸ್ವಸ್ಥರಾದ ಅವರು ಮೃತಪಟ್ಟಿದ್ದಾರೆ. 10 ದಿನಗಳ ಹಿಂದೆಯಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಾಣಂತಿ ಕೊನೆಯುಸಿರೆಳೆದಿದ್ದಾರೆ.
ಸುಂಕದಕಟ್ಟೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ 10 ದಿನಗಳ ಹಿಂದೆ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ, ಮಕ್ಕಳು ಆರೋಗ್ಯವಾಗಿದ್ದ ಕಾರಣ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ನಂತರದಲ್ಲಿ ಬಾಣಂತಿಗೆ ಒಮ್ಮೆಲೆ ಉಸಿರಾಟದ ಸಮಸ್ಯೆ ಎದುರಾಗಿದ್ದು ಕುಟುಂಬದವರು ನಾಲ್ಕೈದು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೂ ದಾಖಲಿಸಿಕೊಂಡಿಲ್ಲ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದ್ದು ಕೆಲವೇ ನಿಮಿಷಗಳಲ್ಲಿ ಬಾಣಂತಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.