ರಾಜ್ಯದಲ್ಲಿ ಕೊರೊನಾ ವಿಶೇಷ ಪ್ಯಾಕೇಜ್ ಘೋಷಣೆಯಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರ ಆರ್ಭಟ ಜೋರಾಗಿದೆ. ಕಳೆದ ಬಾರಿಯ ಪ್ಯಾಕೇಜ್ ಇನ್ನೂ ಫಲಾನುಭವಿಗಳ ಕೈ ತಲುಪಿಲ್ಲ ಅಂತಾ ಆರೋಪಗಳು ಕೇಳಿ ಬರ್ತಿದೆ. ವಿಪಕ್ಷಗಳ ಈ ಆರೋಪವನ್ನ ಡಿಸಿಎಂ ಅಶ್ವತ್ಥ ನಾರಾಯಣ್ ತಳ್ಳಿ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಈ ಆರ್ಥಿಕ ಪ್ಯಾಕೇಜ್ನಲ್ಲಿ ಕೆಲವು ವಲಯಗಳಿಗೆ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ವಲಯಗಳಿಗೆ ಆದ್ಯತೆ ನೀಡುವ ಪ್ಯಾಕೇಜ್ ಕೂಡ ಬರಲಿದೆ. ಆದರೆ ವಿಪಕ್ಷಗಳು ಕಳೆದ ಬಾರಿಯ ಪ್ಯಾಕೇಜ್ ಫಲಾನುಭವಿಗಳ ಕೈ ತಲುಪಿಲ್ಲ ಎಂದು ಹೇಳ್ತಿದ್ದಾರೆ. ವಿಪಕ್ಷ ನಾಯಕರ ಈ ಆರೋಪ ಶುದ್ಧ ಸುಳ್ಳು. ನಮ್ಮ ಸರ್ಕಾರ ಜನರಿಗೆ ಸಹಾಯ ಧನವನ್ನ ನೀಡಿದೆ ಎಂದು ಹೇಳಿದ್ರು.
ಇದೇ ವೇಳೆ ಲಾಕ್ಡೌನ್ ವಿಸ್ತರಣೆ ವಿಚಾರವಾಗಿಯೂ ಮಾತನಾಡಿದ ಅವರು, ಸಿಎಂ ಈಗಾಗಲೇ ತಿಳಿಸಿರುವಂತೆ ಲಾಕ್ಡೌನ್ ವಿಸ್ತರಣೆ ಮಾಡಬೇಕೋ ಬೇಡವೋ ಅನ್ನೋದರ ಬಗ್ಗೆ 23ರಂದು ಚರ್ಚೆ ನಡೆಸುತ್ತೇವೆ. ಲಾಕ್ಡೌನ್ ವಿಸ್ತರಣೆ ವಿಚಾರದಲ್ಲಿ ವಿಪಕ್ಷಗಳ ಸಲಹೆಯನ್ನೂ ಸ್ವೀಕರಿಸುತ್ತಿದ್ದೇವೆ. ಅಂದು ಪರಿಸ್ಥಿತಿಯನ್ನ ನೋಡಿಕೊಂಡು ರಾಜ್ಯಕ್ಕೆ ಲಾಕ್ಡೌನ್ ವಿಸ್ತರಣೆ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನ ತೀರ್ಮಾನಿಸ್ತೇವೆ ಎಂದು ಹೇಳಿದ್ರು.
ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅಶ್ವತ್ಥ ನಾರಾಯಣ್, 18 ರಿಂದ 45 ವರ್ಷದ ಒಳಗಿನವರಿಗೆ ಲಸಿಕೆ ನೀಡಬೇಕು ಅಂದರೆ 6.5 ಕೋಟಿ ಡೋಸ್ ಲಸಿಕೆಯ ಅವಶ್ಯಕತೆ ಇದೆ. ನಾವು ಈಗಾಗಲೇ 3.5 ಕೋಟಿ ಲಸಿಕೆಗೆ ಆರ್ಡರ್ ನೀಡಿದ್ದೇವೆ. ಆದರೆ ಉಳಿದ ಲಸಿಕೆಗೆ ಏನಾದರೂ ವ್ಯವಸ್ಥೆ ಆಗಬೇಕು ಅಲ್ಲವಾ..? ಹೀಗಾಗಿ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆ. ಯಾವುದಾದರೂ ದೇಶ ಲಸಿಕೆ ನೀಡಲು ಮುಂದಾದರೆ ಅದನ್ನ ನಾವು ಖರೀದಿ ಮಾಡ್ತೇವೆ ಎಂದು ಹೇಳಿದ್ರು.