ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ಕೋವಿಡ್ ಕಾರಣಕ್ಕೆ ರದ್ದು ಮಾಡಿರುವುದರಿಂದ ಮುಂದಿನ ಸೆಮಿಸ್ಟರ್ ಗಳ ಪರೀಕ್ಷಾ ಶುಲ್ಕದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ.
ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಈ ಕುರಿತು ಮಾಹಿತಿ ನೀಡಿದ್ದು, ಈ ಸಂಬಂಧ ಎಲ್ಲ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಕಳುಹಿಸಲು ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿದ್ದಾರೆ.
ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಿದ್ದು ಅದನ್ನು ವಾಪಸ್ ಕೊಡಿಸಿ ಎನ್ನುವ ಮನವಿ ವಿದ್ಯಾರ್ಥಿಗಳಿಂದ ಬಂದಿತ್ತು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಪರೀಕ್ಷೆ ರದ್ದಾಗಿದ್ದರೂ ಮೌಲ್ಯಮಾಪನ ಪ್ರಕ್ರಿಯೆ ಇರುತ್ತದೆ. ಹೀಗಾಗಿ ಮುಂದಿನ ಸೆಮಿಸ್ಟರ್ ಗಳ ಪರೀಕ್ಷಾ ಶುಲ್ಕದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.