ಬೆಂಗಳೂರು: 2030ರ ವೇಳೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿಗದಿ ಮಾಡಲಾಗಿರುವ ಎಲ್ಲ ಗುರಿಗಳನ್ನು ಸಂಪೂರ್ಣವಾಗಿ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಮುಂದಿನ ಮೂರು ವರ್ಷಗಳಲ್ಲಿ 6 ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯ, 10 ಬೋಧನಾ ಕೇಂದ್ರಿತ ವಿಶ್ವವಿದ್ಯಾಲಯ ಹಾಗೂ 34 ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಿದೆ.
ಬೆಂಗಳೂರಿನಲ್ಲಿ ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಕುರಿತು ರಚಿಸಲಾಗಿರುವ ಕಾರ್ಯಪಡೆಯ ಜತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಹತ್ವದ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ʼಹೊಸದಾಗಿ ಆರಂಭವಾಗುವ ಈ ಸಂಸ್ಥೆಗಳ ಮೂಲಕ ಪ್ರತಿ ಜಿಲ್ಲೆಯಲ್ಲೂ ಗುಣಮಟ್ಟದ ಶಿಕ್ಷಣ, ಬೋಧನೆ ಹಾಗೂ ಸಂಶೋಧನೆಗೆ ಪೂರಕವಾದ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕಾರ್ಯಪಡೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಒಂದು ಕರಡು ಪ್ರತಿಯನ್ನು ಸರ್ಕಾರಕ್ಕೆ ನೀಡಲಿದೆ. ಈ ತಿಂಗಳ 29 ರೊಳಗೆ ನೀತಿಯ ಸಮಗ್ರ ಜಾರಿಯ ಬಗ್ಗೆ ಪರಿಪೂರ್ಣ ನೀಲನಕ್ಷೆ (ರೋಡ್‌ಮ್ಯಾಪ್)ಯನ್ನು ಸಲ್ಲಿಸಲಿದೆ. ಸಮಾಜದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಸಂಜೀವಿನಿ ಎಂಬುದು ಸರ್ಕಾರದ ಬಲವಾದ ನಂಬಿಕೆ. ಈ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಏನೆಲ್ಲ ಬದಲಾವಣೆ ತರಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರವಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪಡೆ ಜತೆ ಮಹತ್ವದ ಸಮಾಲೋಚನೆ ನಡೆಸಿ ಮುಂದಿನ ಕಾರ್ಯಕ್ರಮಗಳ ದಿಕ್ಸೂಚಿಯನ್ನು ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕ್ಷಿಪ್ರಗತಿಯಲ್ಲಿ ಕ್ರಮ:
ಕಾರ್ಯಪಡೆ ನೀಲನಕ್ಷೆಯನ್ನು ಸಲ್ಲಿಸಿದ ಕೂಡಲೇ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನೊಳಗೊಂಡು ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಾಗುವುದು. ನೀತಿಯ ಜಾರಿಗೆ ಅಗತ್ಯವಾಗಿರುವ ಕಾನೂನು ತಿದ್ದುಪಡಿ, ಆಡಳಿತ ಸುಧಾರಣೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಕ್ಷಿಪ್ರಗತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯಿಂದ ಈ ನೀತಿಯನ್ನು ಜಾರಿ ಮಾಡಲಾಗುವುದು. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಹೊಸ ದಿಕ್ಸೂಚಿಯನ್ನು ನೀಡಬಲ್ಲ ಶಕ್ತಿ ಇದಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಟಾರ್ಗೆಟ್ 2030:
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿ ಮಾಡಿ ಅದರ ಎಲ್ಲ ಗುರಿಗಳನ್ನು ತಲುಪಲು ಮುಂದಿನ 10 ವರ್ಷಗಳ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅದನ್ನು ಟಾರ್ಗೆಟ್ 2030 ಎಂದು ಪರಿಗಣಿಸಿದ್ದೇವೆ. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕಾರ್ಯಸೂಚಿಯನ್ನು ಹಾಕಿಕೊಳ್ಳುತ್ತಿದೆ. ಸದ್ಯಕ್ಕೆ ರಾಜ್ಯವು ನೆರೆ ಮತ್ತು ಕೋವಿಡ್ ಬಿಕ್ಕಟ್ಟಿಗೆ ಗುರಿಯಾಗಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಡಿ ಇಡಲಾಗುವುದು. ಆ ದಾರಿಯಲ್ಲಿ ಸರ್ಕಾರಕ್ಕೆ ನಮ್ಮ ಕಾರ್ಯಪಡೆಯು ನೆರೆವಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯವ್ಯಾಪಿ ಆಂದೋಲನ:
ಇನ್ನು ಮುಂದಿನ ಒಂದು ವರ್ಷ ರಾಜ್ಯದೆಲ್ಲೆಡೆ ಶಿಕ್ಷಣ ನೀತಿಯದ್ದೇ ಧ್ಯಾನ, ಚರ್ಚೆ ನಡೆಯಬೇಕು. ಎಲ್ಲ ರಾಜಕೀಯ ಮುಖಂಡರು, ಸಂಘ- ಸಂಸ್ಥೆಗಳು ಹಾಗೂ ಸಮಾಜದ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುವುದು. ಅದಕ್ಕಾಗಿ ರಾಜ್ಯವ್ಯಾಪಿ ದೊಡ್ಡ ಆಂದೋಲನವನ್ನೇ ಹಮ್ಮಿಕೊಳ್ಳಲಾಗುವುದು. ಈ ಆಂದೋಲನದಲ್ಲಿ ಇಡೀ ಸರಕಾರವೇ ಭಾಗಿಯಾಗಲಿದ್ದು, ಜೊತೆಯಲ್ಲಿ ಶಿಕ್ಷಣ ತಜ್ಞರು ಮತ್ತು ಕಾರ್ಯಪಡೆ ಸದಸ್ಯರೆಲ್ಲರೂ ಇರುತ್ತಾರೆ. ಕಾರ್ಯಪಡೆಯ ರೋಡ್‌ಮ್ಯಾಪ್ ಕೈಗೆ ಸಿಕ್ಕ ಕೂಡಲೇ ಈ ಆಂದೋಲನವನ್ನು ಆರಂಭಿಸಲಾಗುವುದು. ಎಲ್ಲ ತಯಾರಿ ಮತ್ತು ಪೂರ್ವಸಿದ್ಧತೆಯನ್ನು ಮಾಡಿಕೊಂಡೇ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಹೇಳಿದ್ದಾರೆ.
ಹೈ ಕ್ವಾಲಿಟಿ ಶಿಕ್ಷಣ:
ಇನ್ನು ಕಾರ್ಯಪಡೆ ಸಭೆಯಲ್ಲಿ ತಮ್ಮ ವಾದವನ್ನು ಮಂಡಿಸಿದ ಕಾರ್ಯಪಡೆ ಸದಸ್ಯರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಎಲ್ಲ ವ್ಯವಸ್ಥೆಯೂ ಆಗಬೇಕು. ಅದಕ್ಕಾಗಿ ದಕ್ಷತೆಯುಳ್ಳ, ಉತ್ತಮ ಗುಣಮಟ್ಟದ ಹಾಗೂ ಬಹುಶಿಸ್ತಿನ ಶಿಕ್ಷಣ ಸಂಸ್ಥೆಗಳು ಬರುವಂತೆ ನೋಡಿಕೊಳ್ಳಬೇಕು. ಹಾಲಿ ಇರುವ ಶಿಕ್ಷಣ ಸಂಸ್ಥೆಗಳನ್ನು ಆ ಮಟ್ಟಕ್ಕೆ ಎತ್ತರಿಸಬೇಕು. ಅದೇ ಕಾಲೇಜುಗಳನ್ನು ಈಗಿನ ಸ್ಥಿತಿಯಿಂದ ಮೇಲೆತ್ತಿ ಸುಧಾರಿಸಬೇಕು. ಅತ್ಯಂತ ಗುಣಮಟ್ಟದ ಸಂಶೋಧನೆ ಮತ್ತು ಬೋಧನೆಗೆ ವ್ಯವಸ್ಥೆ ಮಾಡಬೇಕು ಎಂದು ಕಾರ್ಯಪಡೆಯ ಸದಸ್ಯರು ಸರಕಾರಕ್ಕೆ ಸಲಹೆ ನೀಡಿದ್ದಾರೆ ಎಂಬುದಾಗಿ ಡಿಸಿಎಂ ಮುಖ್ಯಮಂತ್ರಿ ತಿಳಿಸಿದ್ದಾರೆ.
ಶಾಸಕ ಅರುಣ ಶಹಾಪುರ, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಕಟ್ಟಿಮನಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಚಿಸಿರುವ ಕಾರ್ಯಪಡೆ ಅಧ್ಯಕ್ಷ ಎಸ್.ವಿ.ರಂಗನಾಥ, ಸದಸ್ಯರಾದ ವಿಶ್ರಾಂತ ಕುಲಪತಿ ಪ್ರೊ ಬಿ.ತಿಮ್ಮೇಗೌಡ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅನುರಾಗ್ ಬೆಹರ್, ಬೆಂಗಳೂರು ವಿವಿ ಕುಲಪತಿ ಪ್ರೊ ವೇಣುಗೋಪಾಲ್, ಸೃಷ್ಟಿ ಸಂಸ್ಥೆ ನಿರ್ದೇಶಕಿ ಡಾ.ಗೀತಾ ನಾರಾಯಣನ್, ಪದವಿ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮತ್ತಿತರ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು ವರ್ಚುಯಲ್ ಮೂಲಕ ಸಭೆಗೆ ಹಾಜರಾಗಿದ್ದರು. ಯುಜಿಸಿ ಸದಸ್ಯರಾಗಿ ನೇಮಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯರೂ ಪ್ರೊ. ಎಂ.ಕೆ. ಶ್ರೀಧರ್ ಹಾಗೂ ಅನಂತಪುರ ಸೆಂಟ್ರಲ್ ವಿವಿ ಕುಲಪತಿಯಾಗಿ ನೇಮಕವಾಗಿರುವ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಎಸ್.ಎ.ಕೋರಿ ಅವರನ್ನು ಇದೇ ವೇಳೆ ಉಪ ಮುಖ್ಯಮಂತ್ರಿ ಸರ್ಕಾರದ ಪರವಾಗಿ ಗೌರವಿಸಿದರು.