ಬೆಂಗಳೂರು: ಜುಲೈ 30, 31 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವಥ್ ನಾರಾಯಣ ಈ ಕುರಿತು ಮಾಹಿತಿ ನೀಡಿದ್ದಾರೆ.
30 ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ 1,94,356 ವಿದ್ಯಾರ್ಥಿಗಳು 497 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಗಡಿನಾಡು ಪ್ರದೇಶದ 188 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಆಗಸ್ಟ್ 1 ರಂದು ಕನ್ನಡ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನಾಲ್ಕು ದಿನಗಳ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗಿದೆ. ಸಿಇಟಿ ಕೌನ್ಸೆಲಿಂಗ್ ದಾಖಲೆ ಪರಿಶೀಲನೆ ಮೊದಲಾದ ಪ್ರಕ್ರಿಯೆಗಳು ಆನ್ಲೈನ್ನಲ್ಲಿ ನಡೆಯಲಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿ ಪ್ರವೇಶ ಪಡೆಯಬಹುದಾಗಿದೆ. ಅಂತಿಮ ವರ್ಷದ ಪರೀಕ್ಷೆಗಳು ನಡೆಯುವ ಹಿನ್ನೆಲೆಯಲ್ಲಿ ಆಗಸ್ಟ್ 8 ಮತ್ತು 9 ರಂದು ನಡೆಯಬೇಕಿದ್ದ ಪಿಜಿ ಸಿಇಟಿ, ಡಿಪ್ಲೋಮಾ ಸಿಇಟಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೋವಿಡ್ ಇರುವವರಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎನ್ನಲಾಗಿದೆ.