ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕೋವಿಡ್ ರೋಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೂ.17 ರಂದು ಮೃತಪಟ್ಟಿದ್ದು ರೋಗಿಯ ಅಂತ್ಯಕ್ರಿಯೆಯನ್ನು ವೈದ್ಯಕೀಯ ಶಿಷ್ಟಾಚಾರದಂತೆ ನಿರ್ವಹಿಸದೇ ಇರುವ ಕುರಿತಾಗಿ ಸಂಬಂಧಿಸಿದ ವೈದ್ಯರು, ಅಧಿಕಾರಿಗಳಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೋಟಿಸ್ ನೀಡಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ನಿಯಂತ್ರಣ ಹಿನ್ನೆಲೆ ಅಧಿಕಾರಿ, ನೌಕರರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾಡಳಿತದಿಂದಲೂ ಸಹ ಸಾಕಷ್ಟು ಮಾರ್ಗದರ್ಶನ ನೀಡಲಾಗಿದೆ. ಕೊರೊನಾ ರೋಗಾಣುವಿನಿಂದ ವ್ಯಕ್ತಿ ಮೃತಪಟ್ಟ ಪ್ರಕರಣದಲ್ಲಿ ಅವರ ಅಂತ್ಯಕ್ರಿಯೆಯನ್ನು ಹೇಗೆ ನಡೆಸಬೇಕೆಂಬ ಕುರಿತು ಸರ್ಕಾರ ಎಸ್‍ಓಪಿಯನ್ನು ಹೊರಡಿಸಿದ್ದು ಅದರಂತೆ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಆದರೆ ಜೂ.17 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಚನ್ನಗಿರಿ ತಾಲ್ಲೂಕಿನ ಕೋವಿಡ್ ರೋಗಿಯಾದ ವೃದ್ದೆಯ ಮೃತದೇಹವನ್ನು ವೈದ್ಯಕೀಯ ಶಿಷ್ಟಾಚಾರದಂತೆ ನಿರ್ವಹಿಸಿರುವುದಿಲ್ಲವೆಂದು ವರದಿಯಾಗಿದೆ.
ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ವೃದ್ದೆಯ ಮೃತದೇಹವನ್ನು ಚನ್ನಗಿರಿಯ ಹೆದ್ದಾರಿ ಬಳಿ ಇರುವ ವೀರಶೈವ ರುದ್ರಭೂಮಿಯಲ್ಲಿ ಜೆಸಿಬಿಯಲ್ಲಿ ತೆಗೆದುಕೊಂಡು ಹೋಗಿ ಕಸ ಬಿಸಾಡುವಂತೆ ಬಿಸಾಡಿ ಶವಸಂಸ್ಕಾರ ಮಾಡಲಾಗಿದೆ ಎನ್ನಲಾಗಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಒಂದು ವೇಳೆ ನಿಜವಾಗಿದ್ದಲ್ಲಿ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿರುವ ಪ್ರಯುಕ್ತ ಜಿಲ್ಲಾಧಿಕಾರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭು, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್, ತಹಶೀಲ್ದಾರ್ ಪುಟ್ಟರಾಜುಗೌಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಮುರಳಿ ಇವರಿಗೆ ಕಾರಣ ಕೇಳಿ ನೋಟಿಸ್ ನೀಡಿ, ಜು.3 ರೊಳಗೆ ಲಿಖಿತ ವಿವರಣೆಯನ್ನು ಖುದ್ದು ಹಾಜರಾಗಿ ನೀಡುವಂತೆ ಸೂಚಿಸಿದ್ದಾರೆ. ವಿವರಣೆ ನೀಡುವುದು ತಪ್ಪಿದಲ್ಲಿ ವಿವರಣೆ ಏನೂ ಇಲ್ಲವೆಂದು ತಿಳಿದು ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.