ನಾಡಿನಲ್ಲೆಡೆ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವರಾತ್ರಿ ಉತ್ಸವದ 9 ನೇ ದಿನವಾದ ಇಂದು ಆಯುಧ ಪೂಜೆ ಸಂಭ್ರಮ ಜೋರಾಗಿದೆ.
ಮಹಾ ಮಾರಿ ಕೊರೊನಾ, ನೆರೆ ಹಾವಳಿ, ಬೆಲೆ ಏರಿಕೆ ನಡುವೆಯೂ ಹಬ್ಬ ಕಳೆಗಟ್ಟಿದೆ. ಗ್ಯಾರೇಜ್, ವರ್ಕ್ ಶಾಪ್, ಕಾರ್ಖಾನೆ, ಪ್ರಿಂಟಿಂಗ್ ಪ್ರೆಸ್, ಅಂಗಡಿ ಪೊಲೀಸ್ ಸ್ಟೇಷನ್, ಕಚೇರಿಗಳು ಸೇರಿದಂತೆ ವಿವಿಧಡೆ ಆಯುಧ ಪೂಜೆ ನೆರವೇರಿಸಲಾಗುತ್ತಿದೆ. ಅದೇ ರೀತಿ ಕೃಷಿಕರು ಗಾಡಿ ನೇಗಿಲು ಟ್ರ್ಯಾಕ್ಟರ್ ಮೊದಲಾದ ಸಲಕರಣೆಗಳನ್ನು, ಎತ್ತುಗಳನ್ನು ಪೂಜಿಸಿದ್ದಾರೆ.
ಆರ್ಥಿಕ ಹಿಂಜರಿತದ ಪರಿಣಾಮ ಅನೇಕ ಕಡೆಗಳಲ್ಲಿ ಲಾರಿ, ಟ್ರಕ್ ಮೊದಲಾದ ಸರಕು ಸಾಗಣೆ ವಾಹನಗಳಿಗೆ ಆಯುಧ ಪೂಜೆ ಮಾಡಿಲ್ಲ. ಪ್ರತಿ ಸಲ ವಾಹನಗಳನ್ನು ಅಲಂಕರಿಸಿ ಪೂಜೆ ನೆರವೇರಿಸುತ್ತಿದ್ದ ಹಲವರು ಸರಳವಾಗಿ ಪೂಜೆ ನೆರವೇರಿಸುತ್ತಿದ್ದಾರೆ.
ಇನ್ನು ನೆರೆ ಹಾನಿ, ಮಳೆಯಿಂದ ಸಂಕಷ್ಟದಲ್ಲಿರುವ ಜನ ಸರಳವಾಗಿ ಪೂಜೆ ಮಾಡಿದರೆ, ಮತ್ತೆ ಕೆಲವೆಡೆ ಪೂಜೆಯನ್ನೇ ಮಾಡಿಲ್ಲ. ಇನ್ನುಳಿದಂತೆ ನಿನ್ನೆಯಿಂದಲೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಅಲ್ಲದೆ ದೇವಾಲಯಗಳಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ನಡೆದಿವೆ.
ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಹಬ್ಬದ ಸಂಭ್ರಮವೇನು ಕಡಿಮೆಯಾಗಿಲ್ಲ. ಎಲ್ಲೆಡೆ ಆಯುಧ ಪೂಜೆ ಸಂಭ್ರಮ ಕಂಡುಬಂದಿದ್ದು, ನಾಳೆ ವಿಜಯದಶಮಿ ದಿನ ಅಂಬು ಛೇದನ ಮಾಡಲಾಗುವುದು. ಇದಕ್ಕಾಗಿ ಸಿದ್ಧತೆಗಳು ನಡೆದಿವೆ.