ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಸ್ಥಗಿತಗೊಳಿಸುವುದಿಲ್ಲ. ದೇಶಾದ್ಯಂತ ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕನಿಷ್ಠ ಬೆಂಬಲ ಬೆಲೆ ಯೋಜನೆ ಮುಂದುವರೆಯಲಿದೆ. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸ್ಸು ಅನ್ವಯ ಉತ್ಪಾದನಾ ವೆಚ್ಚದ ಶೇಕಡಾ 1.5 ರಿಂದ 2 ಪಟ್ಟು ಹೆಚ್ಚು ಬೆಲೆ ನಿಗದಿಪಡಿಸಿ ಸರ್ಕಾರ ರೈತರ ಪರ ನಿಂತಿದೆ ಎಂದು ಹೇಳಿದ್ದಾರೆ.
ಗುತ್ತಿಗೆ ಕೃಷಿ ಒಪ್ಪಂದದಿಂದ ರೈತರು ಯಾವಾಗ ಬೇಕಾದರೂ ಹೊರಬರಲು ಅವಕಾಶವಿದೆ ಎಂದು ಅವರು ತಿಳಿಸಿದ್ದು, ಅನ್ನದಾತರಿಗೆ ಆಸರೆಯಾಗಲು ಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ವಲಯದ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರನ್ನು ಸಂಕೋಲೆಯಲ್ಲಿಟ್ಟಿದ್ದ ಕಾಯ್ದೆಗಳನ್ನು ಬದಲಿಸಿ ರೈತರು ಸದೃಢವಾಗಿ ಬದುಕು ಕಟ್ಟಿಕೊಳ್ಳಲು ಹೊಸ ಕಾಯ್ದೆಗಳು ಅನುವು ಮಾಡಿಕೊಡುತ್ತವೆ ಎಂದು ಹೇಳಿದ್ದಾರೆ.
ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ದ್ವಿಮುಖ ನೀತಿ ಅನುಸರಿಸುತ್ತಿದೆ. ಅಧಿಕಾರದಲ್ಲಿದ್ದಾಗ ಒಂದು ರೀತಿ ಇಲ್ಲದಿದ್ದಾಗ ಮತ್ತೊಂದು ರೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.